ಕಾರ್ಕಳ: ಕಾರ್ಕಳ ಬೈಲೂರಿನ ಹೊಸ ಬೆಳಕು ಸೇವಾ ಟ್ರಸ್ಟ್ ನಲ್ಲಿ ಆಸರೆ ಪಡೆದಿದ್ದ ಅನಾಥ ವೃದ್ಧರೊಬ್ಬರು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದಾರೆ.
ನಾಗಪ್ಪ ನಾಡಪ್ಪ (85ವ) ಮೃತಪಟ್ಟವರು. ಕಳೆದ 2021 ರಲ್ಲಿ ಸಾಬ್ರಕಟ್ಟೆಯ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಅವರನ್ನು ಸ್ಥಳೀಯರು ಕಾರ್ಕಳದ ಬೈಲೂರು ಹೊಸ ಬೆಳಕು ಸೇವಾ ಟ್ರಸ್ಟ್ ಗೆ ತಂದು ಬಿಟ್ಟಿದ್ದರು. ಅಂದಿನಿAದ ಆಶ್ರಮದಲ್ಲಿಯೇ ಆಶ್ರಯ ಪಡೆದಿದ್ದ ನಾಗಪ್ಪ ಹರ್ನಿಯ ಹಾಗೂ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಪ್ರತಿದಿನದಂತೆ ಶುಕ್ರವಾರ (ಜು.19) ಬೆಳಿಗ್ಗೆ ಆಶ್ರಮದವರು ಎಬ್ಬಿಸಿದರೂ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಅವರನ್ನು ಚಿಕಿತ್ಸೆಗಾಗಿ ಬೈಲೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅವರನ್ನು ಪರೀಕ್ಷಿಸಿದ ವೈದ್ಯರು ನಾಗಪ್ಪ ಆ ವೇಳೆಗಾಗಲೇ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
