

ಕಾರ್ಕಳ, ಆ 19: ಬಿಜೆಪಿ ಮುಖಂಡ ಹಾಗೂ ಹೊಟೇಲ್ ಉದ್ಯಮಿ ಕಾರ್ಕಳ ತಾಲೂಕಿನ ಬೈಲೂರು ನಿವಾಸಿ ಕೃಷ್ಣರಾಜ್ ಹೆಗ್ಡೆ(46) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ.
ಮಂಗಳವಾರ ಮುಂಜಾನೆ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಕೃಷ್ಣರಾಜ್ ಹೆಗ್ಡೆಯವರು ಆತ್ರಾಡಿಯ ತನ್ನ ಕುಟುಂಬದ ಬೀಡಿನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮವಾರ ರಾತರಿ ಬೈಲೂರಿನಿಂದ ತನ್ನ ಕಾರಿನಲ್ಲಿ ಆತ್ರಾಡಿಯ ಗುತ್ತಿನ ಮನೆಗೆ ಒಬ್ಬಂಟಿಯಾಗಿ ತೆರಳಿದ್ದರು. ಮುಂಜಾನೆ ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದಾಗ ಅವರ ಕಾರು ಬೀಡಿನ ಹಳೆಯ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಪತ್ತೆಯಾಗಿತ್ತು. ಬಳಿಕ ಬೀಡಿನ ಮನೆಯಲ್ಲಿ ನೋಡಿದಾಗ ಕೃಷ್ಣರಾಜ್ ಹೆಗ್ಡೆ ಶವವಾಗಿ ಬಿದ್ದಿದ್ದರು. ಉಡುಪಿ ಹಾಗೂ ಮಣಿಪಾಲದಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅವರು ಬಿಜೆಪಿ ಪಕ್ಷದಲ್ಲಿ ಸಕ್ರೀಯರಾಗಿದ್ದರು. ಬೈಲೂರು ಗಣೇಶೋತ್ಸವ ಹಾಗೂ ಮಾರಿಯಮ್ಮ ದೇವರ ಉತ್ಸವ ಮುಂತಾದ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದರು.
ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಮೂಲಗಳ ಪ್ರಕಾರ ಅವರು ಉದ್ಯಮದಲ್ಲಿ ಆರ್ಥಿಕ ನಷ್ಟದಿಂದ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.. ಹಿರಿಯಡ್ಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ.














