ಕಾರ್ಕಳ: ಬೈಲೂರು ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಪ್ರತಿಮೆ ಕಳವು ಕುರಿತಂತೆ ಶಿಲ್ಪಿ ಕೃಷ್ಣ ನಾಯಕ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಕಾರ್ಕಳ ನಗರ ಠಾಣೆ ಪೊಲೀಸರು ಆರೋಪಿ ಕೃಷ್ಣ ನಾಯಕ್ ಅವರನ್ನು ಕೇರಳದ ಕ್ಯಾಲಿಕಟ್ ನಲ್ಲಿ ಬಂಧಿಸಿದ್ದಾರೆ.
ಬೆಂಗಳೂರು ಕ್ರಿಷ್ ಆರ್ಟ್ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್ ಪರಶುರಾಮನ ನಕಲಿ ಮೂರ್ತಿ ನಿರ್ಮಿಸಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಸ್ಥಳೀಯ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು.
ಇದಾದ ಬಳಿಕ ಬಜಗೋಳಿಯ ಕೃಷ್ಣ ಶೆಟ್ಟಿ ಎಂಬವರು ಪರಶುರಾಮನ ಪ್ರತಿಮೆ ಕಳುವಾಗಿದೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಶಿಲ್ಪಿಯ ಕೃಷ್ಣ ನಾಯಕ್ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇತ್ತ ಎಫ್ಐಆರ್ ದಾಖಲಾದ ಬಳಿಕ ಬಂಧನದ ಭೀತಿಯಲ್ಲಿದ್ದ ಕೃಷ್ಣ ನಾಯಕ್ ನಿರೀಕ್ಷಣಾ ಜಾಮೀನು ಕೋರಿ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ನ.7 ನಿರೀಕ್ಷಣಾ ಜಾಮೀನು ರದ್ದು ಆದೇಶ ಪ್ರಕಟಿಸಿದೆ.
ಇತ್ತ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಆರೋಪಿ ಕೃಷ್ಣ ನಾಯ್ಕ್ ಬಂಧನ ಭೀತಿಯಿಂದ ಪರಾರಿಯಾಗಿದ್ದರು. ಇತ್ತ ಆರೋಪಿಯ ಜಾಡು ಬೆನ್ನತ್ತಿದ ಕಾರ್ಕಳ ಪೊಲೀಸರು ಕೇರಳದ ಕ್ಯಾಲಿಕಟ್ ಎಂಬಲ್ಲಿ ಕೃಷ್ಣ ನಾಯಕ್ ನನ್ನು ಬಂಧಿಸಿ ಕಾರ್ಕಳಕ್ಕೆ ಕರೆ ತರುತ್ತಿದ್ದಾರೆ.