ಬೆಂಗಳೂರು: ಬೈಲೂರು ಸಮೀಪದ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್ ಯೋಜನೆಯ ಪರಶುರಾಮನ ಪ್ರತಿಮೆಯ ನೈಜತೆ ಪರಿಶೀಲನೆಗೆ ಅಕ್ರಮವಾಗಿ ಪ್ರವೇಶಿಸಿ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕಳೆದ ಅಕ್ಟೋಬರ್ 22ರಂದು ಪರಶುರಾಮ ಥೀಂ ಪಾರ್ಕಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭೇಟಿ ನೀಡಿ ಪ್ರತಿಮೆಯ ಗುಣಮಟ್ಟದ ಪರಿಶೀಲನೆ ನಡೆಸಿ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದರು. ಇದೇ ಸಂದರ್ಭ ತೆರವು ಮಾಡಲಾದ ಪ್ರತಿಮೆಯ ಫೈಬರ್ ಅವಶೇಷಗಳನ್ನು ಹಿಡಿದುಕೊಂಡು ಕಾಂಗ್ರೆಸ್ ಮುಖಂಡರು ಸಾರ್ವಜನಿಕರಿಗೆ ಮಾಹಿತಿ ನೀಡುವ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದ್ದವು. ಇದನ್ನೇ ಆಧರಿಸಿ ಎರ್ಲಪಾಡಿ ಗ್ರಾ.ಪಂ. ಅಧ್ಯಕ್ಷ ಸುನಿಲ್ ಹೆಗ್ಡೆ ಕಾರ್ಕಳ ನಗರ ಠಾಣೆಗೆ ನೀಡಿದ ದೂರಿನನ್ವಯ ಕಾಂಗ್ರೆಸ್ ಮುಖಂಡರಾದ ಪುರಸಭೆ ಸದಸ್ಯ ಶುಭದ ರಾವ್, ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಮಾಜಿ ಸದಸ್ಯ ವಿವೇಕಾನಂದ ಶೆಣೈ ಮತ್ತು ಐವನ್ ಮಿರಾಂಡ ಸೇರಿದಂತೆ ಒಟ್ಟು 4 ಮಂದಿಯ ವಿರುದ್ಧ ನಗರ ಠಾಣೆಯಲ್ಲಿ ಐಪಿಎಸ್ ಸೆಕ್ಷನ್ 442, 505(2) ಮತ್ತು 34 ಪ್ರಕಾರ ಕೇಸು ದಾಖಲಿಸಿದ್ದರು.
ಇದೇ ಪ್ರಕರಣವನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಏ.4ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಅರ್ಜಿದಾರರ ಪರವಾಗಿ ನ್ಯಾಯವಾದಿ ಕೆರೆಬೆಟ್ಟು ಪ್ರಸನ್ನ ಶೆಟ್ಟಿ ಈ ಪ್ರಕರಣದ ಬಗ್ಗೆ ವಾದಿಸಿದ್ದರು.