ಕಾರ್ಕಳ:ಶಿಕ್ಷಣವು ಅತ್ಯುತ್ತಮ ಬಂಡವಾಳ.ಹಿಂದೆ ಕೇವಲ ಉದ್ಯೋಗ ಪಡೆಯಲು ಶಿಕ್ಷಣದ ಬೇಕು ಎನ್ನುವ ಮನೋಭಾವನೆಯಿತ್ತು ಆದರೆ ಈಗ ಜ್ಞಾನ ಮತ್ತು ಕೌಶಲಕ್ಕಾಗಿ ಓದು ಎಂಬ ಗ್ರಹಿಕೆ ಆರಂಭವಾಗಿದೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಯ ಹಿಂದೆ ಹೋಗದೆ ಜ್ಞಾನ ಮತ್ತು ಕೌಶಲಗಳನ್ನು ಪಡೆಯಬೇಕು. ಸಂಸ್ಕೃತಿ ಮರೆತರೆ ಒಂದು ಜನಾಂಗವೇ ಅವನತಿಯಾಗುತ್ತದೆ ಅದ್ದರಿಂದ ಶಿಕ್ಷಣದ ಜೊತೆಗೆ ನಮ್ಮ ಜೀವನದ ಆಚಾರ ವಿಚಾರಗಳು, ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕೆಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಬಜಗೋಳಿ ಪದವಿಪೂರ್ವ ಕಾಲೇಜಿನಲ್ಲಿ ಅಮ್ಮನ ನೆರವು ಫೌಂಡೇಶನ್ ವತಿಯಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ದಿ. ಶಿವಣ್ಣ ಶೆಟ್ಟಿ ದೇಜುಬೆಟ್ಟು ರೆಂಜಾಳ ಅವರ ಹೆಸರಿನಲ್ಲಿ ಅವರ ಮಕ್ಕಳು ಮತ್ತು ಕುಟುಂಬದವರು ಈ ವಿದ್ಯಾರ್ಥಿವೇತನ ಪ್ರಾಯೋಜಿಸಿದ್ದು, ಕಾರ್ಕಳ ತಾಲೂಕಿನ ವಿವಿಧ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಬಗೆ ಮತ್ತು ಪದವಿಪೂರ್ವ ತರಗತಿಯಲ್ಲಿ 90% ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಜಗೋಳಿಯ ಅಹಿಂಸಾ ಎನಿಮಲ್ ಕೇರ್ ಟ್ರಸ್ಟಿಗೆ ಅಮ್ಮನ ನೆರವು ಫೌಂಡೇಶನ್ ಮೂಲಕ ಸಹಾಯಧನ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಕಾರ್ಕಳದ ತಹಶೀಲ್ದಾರ್ ಪ್ರದೀಪ್ ಆರ್, ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸ್ಥಾಪಕರಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿ, ಕಾರ್ಕಳ ಬಿಲ್ಲವರ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಕಾರ್ಕಳ ಉದ್ಯಮಿ ಬೋಳ ಪ್ರಸಾದ್ ಕಾಮತ್, ಕಂಬಳ ಕೋಣಗಳ ಮಾಲಕ ಹೊಸಮಾರು ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾಲೇಜಿನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಹಾವೀರ್ ಜೈನ್ ಅವರು ಅಧ್ಯಕ್ಷತೆ ವಹಿಸಿದ್ದರು. ಅಮ್ಮನ ನೆರವು ಫೌಂಡೇಶನ್ ಇದರ ಮಾರ್ಗದರ್ಶಕರಾದ ಶಿಕ್ಷಕ ರಾಜೇಂದ್ರ ಭಟ್ ಕೆ ಮತ್ತು ವಸಂತ್ ಎಂ ಅವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಬಜಗೋಳಿ ಶಾಲಾ ಪೂರ್ವವಿದ್ಯಾರ್ಥಿಯಾದ ರಮಾಕಾಂತ್ ಶೆಟ್ಟಿ ಶ್ರೀಗಳನ್ನು ಸನ್ಮಾನಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಕೆ ಪಿ ಲಕ್ಷ್ಮೀನಾರಾಯಣ್ ಮತ್ತು ಸಾಹಿತಿ ರೇಷ್ಮಾ ಶೆಟ್ಟಿ ಗೋರೂರು ಅವರು ಅಭಿನಂದನಾ ಭಾಷಣ ಮಾಡಿದರು. ಪ್ರೌಢಶಾಲೆಯ ಮುಖ್ಯಶಿಕ್ಷಕ ಗಣೇಶ್, ಎಸ್ಡಿಎಂಸಿ ಅಧ್ಯಕ್ಷ ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು.
ಅಮ್ಮನ ನೆರವು ಫೌಂಡೇಶನ್ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ ಅವರು ದಾನಿಗಳನ್ನು ಸ್ಮರಿಸಿದರು. ರಾಜೇಂದ್ರ ಭಟ್ ಕೆ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.