ಇಸ್ಲಾಮಾಬಾದ್: ಪಾಕಿಸ್ತಾನಿ ಸೇನೆಯ ವಿರುದ್ಧ ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ ಬಲೂಚ್ ಪ್ರತ್ಯೇಕತಾವಾದಿ ಬಂಡುಕೋರರು ಆಪರೇಷನ್ BAM ಎಂಬ ಹೆಸರಿನಲ್ಲಿ ಪಾಕಿಸ್ತಾನದ ಸೇನೆಯ ವಿರುದ್ಧ ರಣಭೀಕರ ದಾಳಿ ನಡೆಸಿದೆ.
ಸುಧಾರಿತ ಐಇಡಿ ಸ್ಫೋಟಕಗಳನ್ನು ಬಳಸಿ ಪಾಕಿಸ್ತಾನಿ ಸೇನೆಯ 84 ನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ಬಿಎಲ್ಎಫ್ ಹೇಳಿಕೊಂಡಿದೆ. ಈ ದಾಳಿಯಲ್ಲಿ ಕನಿಷ್ಠ 70ಕ್ಕೂ ಅಧಿಕ ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 51 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬಿಎಲ್ಎಫ್ ಹೇಳಿಕೊಂಡಿದೆ.
ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ (ಬಿಎಲ್ಎಫ್) ಪ್ರಕಾರ, ಪಾಕಿಸ್ತಾನಿ ಸೇನೆಯ ಹೊರತಾಗಿ ಈ ದಾಳಿಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಾದ ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ಮತ್ತು ಐಎಸ್ಐನ 9 ಏಜೆಂಟ್ ಗಳನ್ನು ಹತ್ಯೆ ಮಾಡಲಾಗಿದೆ ಎಂದಿದೆ.
ಇದಲ್ಲದೇ ದಾಳಿಯಲ್ಲಿ ಪಾಕಿಸ್ತಾನದ 7 ಮೊಬೈಲ್ ಟವರ್’ಗಳಿಗೆ ಬೆಂಕಿ ಹಚ್ಚಲಾಗಿದ್ದು, ಸೇನೆಯ ಯಂತ್ರೋಪಕರಣಗಳು ಮತ್ತು ತಾತ್ಕಾಲಿಕ ಚೆಕ್ ಪೋಸ್ಟ್ ಗಳನ್ನು ಧ್ವಂಸ ಮಾಡಲಾಗಿದ್ದು, ಪಾಕಿಸ್ತಾನಿ ಸೇನೆಯ ಚಟುವಟಿಕೆಗಳನ್ನು ತಡೆಯಲು 22 ಆಯಕಟ್ಟಿನ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ ನಮ್ಮ ಯೋಧರು ಸಜ್ಜಾಗಿದ್ದಾರೆ ಎಂದು ಬಿಎಲ್ಎಫ್ ಹೇಳಿಕೊಂಡಿದೆ.
ಈ ದಾಳಿಯಲ್ಲಿ ಬಿಎಲ್ಎಫ್ ಪಾಕ್ ನ 24 ಖನಿಜ ಸಾಗಿಸುವ ಟ್ರಕ್ ಗಳು ಮತ್ತು ಗ್ಯಾಸ್ ಟ್ಯಾಂಕರ್’ ಗಳನ್ನು ಸಹ ನಾಶಪಡಿಸಿತು. ಇದರೊಂದಿಗೆ, ಐದಕ್ಕೂ ಹೆಚ್ಚು ಕಣ್ಗಾವಲು ಡ್ರೋನ್’ಗಳನ್ನು ಮತ್ತು ಕ್ವಾಡ್ ಕಾರ್ಟರ್’ಗಳನ್ನು ಹೊಡೆದುರುಳಿಸಲಾಗಿದ್ದು ಇದರಿಂದ ಪಾಕಿಸ್ತಾನದ ಕಣ್ಗಾವಲು ವ್ಯವಸ್ಥೆಯ ನಾಶವಾಗಿದೆ. ಬಿಎಲ್ಎಫ್ ಪ್ರಕಾರ, ಅದರ 84 ದಾಳಿಗಳಲ್ಲಿ, 30 ಕ್ಕೂ ಹೆಚ್ಚು ದಾಳಿಗಳನ್ನು ನೇರವಾಗಿ ಪಾಕಿಸ್ತಾನಿ ಸೇನೆ ಮತ್ತು ಗಡಿ ಭದ್ರತಾ ಪಡೆ ಸಿಬ್ಬಂದಿಗಳ ಮೇಲೆ ನಡೆಸಲಾಯಿತು, ಆದರೆ 2 ದಾಳಿಗಳನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳ ಮೇಲೆ ನಡೆಸಲಾಯಿತು. ಇದರ ಹೊರತಾಗಿ, ಬಿಎಲ್ಎಫ್ ಹೊಂಚುದಾಳಿಯ ಮೂಲಕ 4 ದಾಳಿಗಳನ್ನು ನಡೆಸಿತು ಮತ್ತು ಕಸ್ಟಮ್ಸ್ ಮತ್ತು ಕೋಸ್ಟ್ ಗಾರ್ಡ್ ಮೇಲೆ ತಲಾ ಒಂದು ದಾಳಿ ನಡೆಸಿತು. ಅಲ್ಲದೆ, ಲೆವಿ ಚೆಕ್ ಪೋಸ್ಟ್’ಗಳ ಮೇಲೆ 4 ದಾಳಿಗಳನ್ನು ಮತ್ತು ಪೊಲೀಸ್ ಚೆಕ್ ಪೋಸ್ಟ್ ಮೇಲೆ 4 ದಾಳಿಗಳನ್ನು ನಡೆಸಲಾಯಿತು.
ಬಿಎಲ್ಎಫ್ ಪ್ರಕಾರ, ಅದರ ಹೋರಾಟಗಾರರು 4 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪಾಕಿಸ್ತಾನಿ ಪಡೆಗಳ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು, ಇದರಲ್ಲಿ ಸ್ವಯಂಚಾಲಿತ ಮೆಷಿನ್ ಗನ್ ಗಳು ಸಹ ಸೇರಿವೆ. ಈ ಸಂಪೂರ್ಣ ಕಾರ್ಯಾಚರಣೆಯನ್ನು ಬಲೂಚಿಸ್ತಾನದ ಮಕ್ರಾನ್, ರೇಖಾನ್, ಕೊಲ್ವಾ, ಸರವನ್, ಝಲವಾನ್, ಕೊಹ್-ಎ-ಸುಲೈಮಾನ್, ಬೇಲಾ ಮತ್ತು ಕಚ್ಚಿಯಂತಹ ಪ್ರದೇಶಗಳಲ್ಲಿ ನಡೆಸಲಾಯಿತು. ಪಾಕಿಸ್ತಾನದ ಸರ್ಕಾರ ಮತ್ತು ಸೈನ್ಯವು ಬಲೂಚಿಸ್ತಾನದ ಸಂಪತ್ತನ್ನು ನಿರಂತರವಾಗಿ ಲೂಟಿ ಮಾಡುತ್ತಿದೆ ಎಂದು ಬಿಎಲ್ಎಫ್ ಆರೋಪಿಸಿದೆ.