ಕಾರ್ಕಳ: ಸರ್ಕಾರಿ ಹಾಗೂ ಅನದಾನಿತ ಶಾಲೆಗಳು ಹಾಗೂ ಇತರೆ ಸರ್ಕಾರಿ ಜಾಗಗಳಲ್ಲಿ ಖಾಸಗಿ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸುವುದಕ್ಕೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನೇ ನಿರಾಕರಿಸುವುದಕ್ಕೆ ಸರ್ಕಾರ ಮುಂದಾಗಿದೆ. ಇದು ಸರ್ಕಾರಿ ಶಾಲೆಗಳಿಂದ ಸಾರ್ವಜನಿಕರನ್ನು ದೂರ ಮಾಡುವ ಹುನ್ನಾರವಾಗಿದೆ ಎಂದು ಶಾಸಕ ವಿ.ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಾಲಾ ಆವರಣದಲ್ಲಿ ಚಟುವಟಿಕೆ ನಡೆಸುವುದಕ್ಕೆ ಖಾಸಗಿ ಸಂಸ್ಥೆಗಳಿಗೆ ಪೂರ್ವಾನುಮತಿ ಕಡ್ಡಾಯ, ಖಾಸಗಿ ವ್ಯಕ್ತಿಗಳ ಪ್ರವೇಶ ನಿರ್ಬಂಧ ಮಾಡುವುದರ ಉದ್ದೇಶವೇನು?
ಗ್ರಾಮೀಣ ಸರ್ಕಾರಿ ಶಾಲೆಗಳು ಕೇವಲ ಕಲಿಕಾ ಕೇಂದ್ರವಲ್ಲ. ಅಲ್ಲಿ ವಾರಾಂತ್ಯದಲ್ಲಿ ಸಂಘ- ಸಂಸ್ಥೆಗಳ ಸಭೆ ನಡೆಯುತ್ತದೆ, ಸಾಂಸ್ಕ್ರತಿಕ ಚಟುವಟಿಕೆಗಳು ನಡೆಯುತ್ತದೆ, ಕ್ರೀಡಾಕೂಟಗಳು ನಡೆಯುತ್ತದೆ. ಹಾಗಾದರೆ ಸರ್ಕಾರ ಇದೆಲ್ಲವನ್ನೂ ಬ್ಯಾನ್ ಮಾಡುತ್ತದೆಯೇ ? ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರಿ ಶಾಲಾ ಆವರಣವನ್ನು ನಿರ್ಬಂಧಿಸುವುದೆಂದರೆ ಸಾರ್ವಜನಿಕರಿಂದ ಅದನ್ನು ದೂರ ಇಡುವುದು, ಕಾಲಕ್ರಮೇಣ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಸರ್ಕಾರದ ಹುನ್ನಾರ ಎಂದು ಅನಿಸುತ್ತಿದೆ. ಇದು ಸರ್ಕಾರದ ಬಾಲಿಶ ನಿರ್ಧಾರವಲ್ಲದೇ ಮತ್ತೇನು ಅಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.