ಬೆಂಗಳೂರು: ಆಗಸ್ಟ್ 15ರಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ನೀರಿನ ಬಾಟಲ್ ಸೇರಿದಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡಲಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 15 ರಿಂದ ಪ್ಲಾಸ್ಟಿಕ್ ಮುಕ್ತ ದೇವಾಲಯ (Plastic Free Temple) ಪ್ರಾರಂಭ ಮಾಡುತ್ತಿದ್ದೇವೆ. ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಸೂಚಿಸಿದರು.
ಈ ಆದೇಶ ಜಾರಿಗೆ 2 ತಿಂಗಳು ಸಮಯ ಕೊಡಲಾಗಿದ್ದು, ಈಗಾಗಲೇ ಪ್ಲಾಸ್ಟಿಕ್ ಪದಾರ್ಥಗಳು ತೆಗೆದುಕೊಂಡಿದ್ದರೆ ಅದನ್ನು ಬಳಕೆ ಮಾಡಬಹುದು. ಆಗಸ್ಟ್ 15 ರಿಂದ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು. ಅಲ್ಲದೇ ಬಹುಮುಖ್ಯವಾಗಿ ಬೇರೆ ರಾಜ್ಯದಲ್ಲಿ ಇರುವ ಭವನಗಳ ರೂಮ್ ಬುಕ್ಕಿಂಗ್ ಅನ್ನು ಆನ್ಲೈನ್ ಮೂಲಕ ಜಾರಿ ಮಾಡಲು ವ್ಯವಸ್ಥೆ ರೂಪಿಸಲು ರಾಮಲಿಂಗರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದೇವಾಲಯದ ಅರ್ಚಕರ ಮಕ್ಕಳಿಗೆ ಅರ್ಚಕರ 249 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಅರ್ಚಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ 34,37,000 ರೂ., ಗ್ರಾಮಾಂತರ ಮತ್ತು ನಗರ ಭಾಗದಲ್ಲಿ ಇರುವ ಮುಜರಾಯಿ ದೇವಾಲಯಗಳ ಆಸ್ತಿಗಳನ್ನ ಪ್ರತ್ಯೇಕ ಸರ್ವೆ ಮಾಡಬೇಕು. ದೇವಸ್ಥಾನ ಹೆಸರಿನಲ್ಲಿ ಖಾತೆ, ಆಸ್ತಿ ಪತ್ರ ದಾಖಲೆಗಳು ಸರಿಯಾಗಿ ಇರದಿದ್ದರೆ ಎಲ್ಲಾ ದೇವಾಲಯದ ಜಾಗ 3 ತಿಂಗಳ ಒಳಗಡೆ ಸರ್ವೆ ಮಾಡಿ ನೋಟಿಫಿಕೇಶನ್ ಇತ್ಯಾದಿ ಸೂಚನೆಗಳನ್ನು ಸಚಿವರು ಸಭೆಯಲ್ಲಿ ನೀಡಿದ್ದಾರೆ.