ಬೆಂಗಳೂರು: ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯ ಸ್ಫೋಟದ ನಂತರ ಜೆಪಿ ನಗರದಲ್ಲಿ ಮತ್ತೊಂದು ನಿಗೂಢ ಸ್ಪೋಟ ನಡೆದಿದ್ದು ಕುಕ್ಕರ್ ಸ್ಫೋಟಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿದ್ದ. ಇದೀಗ ಸ್ಫೋಟ ನಡೆದ ಸ್ಥಳಕ್ಕೆ ಎನ್‌ಐಎ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಬೆಂಗಳೂರಿನ ಜೆಪಿ ನಗರದ 6ನೇ ಹಂತದಲ್ಲಿನ ಮನೆಯೊಂದರಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ, ಬಲ್ಬ್ ಗೆ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು ಉತ್ತರ ಪ್ರದೇಶ ಮೂಲದ ಮೋಸಿನ್ ಹಾಗೂ ಸಮೀರ್ ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗಾಯಾಳು ಮೋಸಿನ್ ಮೃತಪಟ್ಟಿದ್ದ.
ಈ ಸ್ಪೋಟಕದ ಹಿಂದೆ ಉಗ್ರರ ಕೃತ್ಯದ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ಸ್ಥಳದಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
`