ಕಾರ್ಕಳ : ಗ್ರಾಮದ ಅಭಿವೃದ್ದಿಯಲ್ಲಿ ಗ್ರಾಮ ಪಂಚಾಯತಿ ಹಾಗೂ ಜನಪ್ರತಿನಿಧಿಗಳ ಪಾತ್ರ ಮಹತ್ವವಾಗಿದೆ. ಜನರಿಗೆ ಅಗತ್ಯವಿರುವ ಯೋಜನೆಯನ್ನು ತಲುಪಿಸುವಲ್ಲಿ ಜನಪ್ರತಿನಿಧಿ ಕರ್ತವ್ಯ ಬಹುಮುಖ್ಯವಾಗಿದೆ. ಬೆಳೆಯುತ್ತಿರುವ ಬೆಳ್ಮಣ್‌ಗೆ ಅಗತ್ಯ ಇರುವ ಮಾರುಕಟ್ಟೆಯ ಸಂಕೀರ್ಣ ನಿರ್ಮಾಣ ಪಂಚಾಯತ್‌ನ ಅನುದಾನದಲ್ಲಿ 16.00 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವುದು ಪಂಚಾಯತ್ ಸದಸ್ಯರ ಇಚ್ಛಾ ಶಕ್ತಿಯನ್ನು ತೋರಿಸುತ್ತದೆ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಶನಿವಾರ ಬೆಳ್ಮಣ್ ಪಂಚಾಯತ್‌ನ ಮಾರುಕಟ್ಟೆಯಲ್ಲಿ ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.
ಬೆಳ್ಮಣ್ ಪಂಚಾಯತ್ ಸದಸ್ಯರು ತಮ್ಮ ವಾರ್ಡ್‌ಗಳಿಗೆ ಅನುದಾನ ಕೇಳದೆ ಸಾರ್ವಜನಿಕ ಉಪಯೋಗಕ್ಕಾಗುವ ಯೋಜನೆಗಳಿಗೆಪೂರಕವಾಗಿ ಸಹಕರಿಸುತ್ತಿರುವುದು ಪ್ರಶಂಸನೀಯ. ಇಂತಹ ಮಾದರಿ ಕಾರ್ಯಗಳು ಸದಾ ನಡೆಯುತ್ತಿರಲಿ ಎಂದರು.
ಇದೇ ಸಂದರ್ಭದಲ್ಲಿ ಬೆಳ್ಮಣ್, ನಂದಳಿಕೆ, ಇನ್ನಾ, ಬೋಳ, ಮುಂಡ್ಕೂರು ಪಂಚಾಯತ್‌ನ ಕಂದಾಯ ಇಲಾಖೆ, ಕಾರ್ಮಿಕ , ಕ್ರೀಡಾ ನಿಧಿ, ವಿಕಲಚೇತನರ ನಿಧಿ ಸಹಿತ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಸವಲತ್ತು ವಿತರಣೆ ನಡೆಯಿತು. ವಿವಿಧ ಅಹವಾಲುಗಳ ಸ್ವೀಕಾರ ನಡೆಯಿತು.
ಬೆಳ್ಮಣ್ ಪಂಚಾಯತ್ ಅಧ್ಯಕ್ಷೆ ರಾಮೇಶ್ವರೀ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಕಾರ್ಕಳ ತಾಲೂಕು ತಹಶೀಲ್ದಾರ್ ಪ್ರದೀಪ್ ಆರ್, ಮುಂಡ್ಕೂರು ಪಂಚಾಯತ್ ಅಧ್ಯಕ್ಷ ದೇವಪ್ಪ ಸಪಳಿಗ, ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ, ಬೆಳ್ಮಣ್ ಪಂಚಾಯತ್ ಉಪಾಧ್ಯಕ್ಷ ಸಂದೀಪ್ ಪೂಜಾರಿ, ರೇಷ್ಮ ಶೆಟ್ಟಿ,ಸತೀಶ್ ಪೂಜಾರಿ, ರವೀಂದ್ರ ಶೆಟ್ಟಿ, ದೇವೇಂದ್ರ ಶೆಟ್ಟಿ, ಆಶಾ ದೇವೇಂದ್ರ ಶೆಟ್ಟಿ, ಶಂಕರ ಕುಂದರ್ ಮತ್ತಿತರರಿದ್ದರು.
ತಾಲೂಕು ತಹಶೀಲ್ದಾರ್ ಪ್ರದೀಪ್ ಆರ್. ಪ್ರಸ್ತಾವನೆಗೈದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಮತಾ ವೈ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.