Share this news

ಕಾರ್ಕಳ: ಮುಸ್ಲಿಮರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಂತೆ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಸದ್ದಿಲ್ಲದೇ ಶಿಫಾರಸ್ಸು ಮಾಡುವ ಮೂಲಕ ಸಿಎಂ‌ ಸಿದ್ದರಾಮಯ್ಯನವರು ಹಿಂದುಳಿದ ವರ್ಗಕ್ಕೆ ಮಹಾ ದ್ರೋಹ ಎಸಗುತ್ತಿದ್ದಾರೆ ಎಂದು ಮಾಜಿ ಸಚಿವ ವಿ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದುಳಿದ ವರ್ಗಗಳ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಂಡು ಅದನ್ನು ಮುಸ್ಲಿಮರಿಗೆ ಹಂಚುವ ಕುತಂತ್ರ ಹಾಗೂ ತುಷ್ಟೀಕರಣ ರಾಜಕಾರಣದ ಸಂಚು ಇದರಲ್ಲಿ ಅಡಗಿದೆ.ಹಿಂದುಳಿದ ವರ್ಗಗಳ ಹಿತಾಸಕ್ತಿ ರಕ್ಷಣೆಯ ಚಾಂಪಿಯನ್ ತಾನೆಂದು ಸ್ವಯಂ ಘೋಷಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಓಬಿಸಿ ಸಮುದಾಯಕ್ಕಿಂತ ಮುಸ್ಲಿಂ ಓಲೈಕೆಯೇ ಮುಖ್ಯ ಎಂಬುದು ಇದರಿಂದ ಸಾಬೀತಾಗಿದೆ.
ತಾನು ಓಬಿಸಿ ಸಮುದಾಯದ ಪರ ಎಂದು ಭಾಷಣ ಬಿಗಿಯುವ ಕಾಂಗ್ರೆಸ್ ನಾಯಕರ ಮಲತಾಯಿ ಧೋರಣೆ ಬಟಾಬಯಲಾಗಿದೆ.
ಕಾಂಗ್ರೆಸ್ ಸರ್ಕಾರದ ಈ ನಿರ್ಧಾರದ ವಿರುದ್ಧ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಸಕಾಲದಲ್ಲಿ ಈ ಬಗ್ಗೆ ಆಕ್ಷೇಪ ಎತ್ತದೇ ಹೋಗಿದ್ದರೆ ಭವಿಷ್ಯದಲ್ಲಿ ಹಿಂದುಳಿದ ವರ್ಗ ತೆರಬೇಕಿದ್ದ ಬೆಲೆಯನ್ನು ಊಹಿಸಿಕೊಂಡರೂ ಒಂದು ಕ್ಷಣ ಮೈ ನಡುಗುತ್ತದೆ ಎಂದು ಸುನಿಲ್ ಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ನಮ್ಮ ವಿದ್ಯಾರ್ಥಿಗಳು ಹಾಗೂ ಯುವಕರ ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿಯ ಪಾಲನ್ನು ಮುಸ್ಲಿಮರಿಗೆ ಹಂಚುವ ಜತೆಗೆ ನಗರ- ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳು ಸಂವಿಧಾನದ ಪ್ರಕಾರ ಪಡೆದ ಪಾಲನ್ನೂ ಮಸ್ಲಿಮರ ಜತೆಗೆ ಹಂಚಿಕೊಳ್ಳಬೇಕಾಗುತ್ತದೆ. ಸಿದ್ದರಾಮಯ್ಯನವರೇ, ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ ? ಸಮುದಾಯಕ್ಕೆ ಮಾಡುವ ಈ ಚಾರಿತ್ರಿಕ ಅನ್ಯಾಯದಿಂದ ನಿಮಗೆ ಸಿಗುವ ಲಾಭವೇನು ?ಆಯೋಗಕ್ಕೆ ಈ ಶಿಫಾರಸು ಮಾಡುವ ಮುನ್ನ ಯಾರ ಜತೆಗೆ ಚರ್ಚೆ ನಡೆಸಿದ್ದೀರಿ ? ಕದ್ದುಮುಚ್ಚಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ಕೊಟ್ಟವರು ಯಾರು? ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ

 

 

 

 

 

 

 

 

 

Leave a Reply

Your email address will not be published. Required fields are marked *