ಬೆಳಗಾವಿ: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿ ನಾಸೀರ್ ಹುಸೇನ್ ಅವರನ್ನು ನಾಲ್ಕನೇ ಅಪರಾಧಿಯನ್ನಾಗಿ ಮಾಡಬೇಕು. ತನಿಖೆ ಪೂರ್ಣಗೊಳ್ಳುವವರೆಗೂ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧನೆ ಮಾಡದಂತೆ ಉಪರಾಷ್ಟ್ರಪತಿಗೆ ಬಿಜೆಪಿ ಪತ್ರ ಬರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಗಳಿಗೆ ಸೂತ್ರದಾರಿಗಳು ಹಾಗೂ ಪಾತ್ರದಾರಿಗಳು ಯಾರು ಎಂದು ಸಮಗ್ರ ತನಿಖೆ ನಡೆಸಿ ಸ್ಪಷ್ಟಪಡಿಸಬೇಕು. ನಾಸೀರ್ ಹುಸೇನ್ ಅವರನ್ನೂ ತನಿಖೆಗೊಳಪಡಿಸಬೇಕು. ಪ್ರಕರಣದಲ್ಲಿ ಅವರು ನಿರ್ದೋಶಿಯಾಗಿ ಹೊರಬರುವವರೆಗೆ ಪ್ರಮಾಣವಚನ ಸ್ವೀಕಾರ ಮಾಡಲು ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.
ಈ ಪ್ರಕರಣದಲ್ಲಿ ಸರ್ಕಾರ ಪೊಲೀಸರ ಮೇಲೆ ಒತ್ತಡ ಹಾಕುತ್ತಿದೆ. FSL ವರದಿಯನ್ನು ಯಾಕೆ ಬಹಿರಗೊಳಿಸುತ್ತಿಲ್ಲ. ಪಾಕಿಸ್ತಾನ ಜಿಂದಾಬಾದ್ ಎಂದು ಯಾರೇ ಕೂಗಿದರೂ ಸಹ ಅವರು ದೇಶದ್ರೋಹಿಗಳೇ.ಅಲ್ಲಿ ಜಾತಿ, ಧರ್ಮ ಹಿಂದೂ ಮುಸ್ಲಿಂ ಅಂತ ಯಾವುದೂ ಬರುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.