ಕಾರ್ಕಳ, ಜು.18: ಸತ್ಯ ಧರ್ಮ ನ್ಯಾಯ ನಿಷ್ಠೆಯಿಂದ ದೈವತ್ವಕ್ಕೆ ಏರಿದ ವಿಶ್ವಕರ್ಮ ಸಮುದಾಯದ ಕಾರಣಿಕಪುರುಷ ಕಲ್ಕುಡ ದೈವಕ್ಕೆ ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ಅವಮಾನ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಬೋಳ ಸುಧಾಕರ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಕಳ ಬೈಲೂರಿನ ಪರಶುರಾಮ ಪ್ರತಿಮೆಯ ವಿವಾದದ ವಿಚಾರವಾಗಿ ಟಿವಿ ವಾಹಿನಿಯೊಂದು ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಕಾರ್ಕಳ ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ಅವರು ದೈವಾಂಶ ಸಂಭೂತ ಶಿಲ್ಪಿ ಬಹುಜನರಿಂದ ಆರಾಧನೆಗೊಂಡು ಕಾರಣಿಕ ಪುರುಷರಾಗಿ ಅವತಾರ ಎತ್ತಿ ದೈವತ್ವಕ್ಕೆ ಏರಿದ ಕಲ್ಕುಡ ದೈವಕ್ಕೆ ಅಪಮಾನ ಎಸಗಿರುವುದು ಖಂಡನೀಯ, ನವೀನ್ ನಾಯಕ್ ಅವರ ಈ ಕೀಳು ಮನಸ್ಥಿಯನ್ನು ನಾವು ಖಂಡಿಸುತ್ತೇವೆ. ಭ್ರಷ್ಟ ರಾಜಕಾರಣ ಮತ್ತು ಭ್ರಷ್ಟ ಅಧಿಕಾರಿಗಳಿಂದ ಪವಿತ್ರವಾಗಿರುವ ಪರಶುರಾಮನಿಗೆ ಅಪಚಾರ ಎಸಗಿದಂತಾಗಿರುತ್ತದೆ.ಈ ಕೃಷ್ಣ ನಾಯಕನನ್ನು ತುಳುನಾಡಿನ ಬಹುಜನರ ಆರಾಧ್ಯಮೂರ್ತಿ ಕಾರ್ಣಿಕ ದೈವಾಂಶ ಸಂಭೂತನಾದ ಕಲ್ಕುಡನಿಗೆ ಹೋಲಿಸಿದ್ದು ವಿಪರ್ಯಾಸವೇ ಸರಿ. ಇದು ತುಳುನಾಡಿನ ಜನರ ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಿದೆ.
ಕಾರ್ಕಳದ ಇತಿಹಾಸವನ್ನು ಅರಿಯದೇ ಶಿಲ್ಪಿ ಕಲ್ಕುಡನನ್ನು ಕಾರ್ಕಳ ಪರಶುರಾಮ ಪ್ರತಿಮೆ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ವಂಚನೆ ಪ್ರಕರಣದಲ್ಲಿ ಜೈಲುಪಾಲಾದ ಪರಶುರಾಮ ವಿಗ್ರಹ ರಚಿಸಿದ ಕೃಷ್ಣ ನಾಯಕನಿಗೆ ಹೋಲಿಕೆ ಮಾಡಿದ್ದು ಖಂಡನೀಯ.
ಪರಮ ಶ್ರೇಷ್ಠ ಶಿಲ್ಪಿ ಕಲ್ಕುಡನು ಯಾವುದೇ ಆಧುನಿಕ ಯಂತ್ರೋಪಕರಣಗಳ ಸಹಾಯವಿಲ್ಲದೇ ತನ್ನ ಸತ್ಯ ಧರ್ಮ ನ್ಯಾಯ ನಿಷ್ಠೆಯೊಂದಿಗೆ ತನ್ನ ಚಾಕಚಕ್ಯತೆಯ ವೃತ್ತಿ ಕೌಶಲ್ಯದಿಂದ ವಿಶ್ವ ಶ್ರೇಷ್ಠ ಕಾರ್ಕಳದ ಬಾಹುಬಲಿ ವಿಗ್ರಹವನ್ನು ನಿರ್ಮಿಸಿರುವುದನ್ನು ಇತಿಹಾಸ ಗುರುತಿಸಿದೆ. ಕಲ್ಕುಡನ ವೃತ್ತಿ ಕೌಶಲ್ಯವೇ ಆತನಿಗೆ ಮುಳುವಾಗಿ ಈ ರೀತಿಯ ಕೆತ್ತನೆ ಬೇರೆ ಎಲ್ಲಿಯೂ ನಿರ್ಮಾಣವಾಗಬಾರದು ಎನ್ನುವ ದುರಾಲೋಚನೆಯಿಂದ ಭೈರವರಸು ಒಂದು ಕಾಲು ಮತ್ತು ಒಂದು ಕೈಯನ್ನು ಕಡಿದಿರುವುದು ಈಗ ಇತಿಹಾಸ.ಆಳುವವರ ಷಡ್ಯಂತ್ರಕ್ಕೆ ಬಲಿಯಾಗಿ ಕಲ್ಕುಡನು ಒಂದು ಕೈ ಮತ್ತು ಒಂದು ಕಾಲನ್ನು ಕಳೆದುಕೊಂಡರೂ ನಂತರದ ದಿನದಲ್ಲಿ ವೇಣೂರಿನ ಗೋಮಟೇಶ್ವರ ಪ್ರತಿಮೆಯನ್ನು ನಿರ್ಮಿಸಿ, ನಂತರ ತನ್ನ ತಂಗಿಯೊಂದಿಗೆ ಕಾಯ ಬಿಟ್ಟು ಮಾಯವನ್ನು ಸೇರಿ ಕಾರಣಿಕ ಪುರುಷರಾಗಿ ಕಲ್ಕುಡ ಕಲ್ಲುರ್ಟಿ ದೈವಗಳಾಗಿ ಅವತಾರ ಎತ್ತಿರುವುದು ಈಗ ಇತಿಹಾಸ. ದೈವಾಂಶ ಸಂಭೂತ ಕಾರಣಿಕ ಪುರುಷ ಕಲ್ಕುಡನು ದೈವವಾಗಿ ಸರ್ವರಿಂದಲೂ ಆರಾಧನೆಗೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ, ಶ್ರೇಷ್ಠ ಶಿಲ್ಪಿಯನ್ನು ವೃತ್ತಿ ಧರ್ಮಕ್ಕೆ ಅಪಮಾನ ಎಸಗಿದ ನವೀನ್ ನಾಯಕ್ ತನ್ನ ತಪ್ಪಿಗೆ ಕಲ್ಕುಡ ದೈವದ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಸುಧಾಕರ ಆಚಾರ್ಯ ಆಗ್ರಹಿಸಿದ್ದಾರೆ.