
ಕಾರ್ಕಳ, ಮಾ.05: ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಸುನೀಲ್ ಕುಮಾರ್ ಅವರು ಮರ್ಣೆ,ಹಿರ್ಗಾನ, ಕುಕ್ಕುಂದೂರು, ಕಡ್ತಲ ಗ್ರಾಮದ ರೈತರ ಬೇಸಾಯ ಮತ್ತು ತೋಟಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಮಂಜೂರುಗೊಳಿಸಿದ್ದರು. ಇದರಿಂದ ಸಾವಿರಾರು ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ವ್ಯವಸ್ಥೆಯಾಗಿದೆ. ಇಂತಹ ಮಹತ್ವಾಕಾಂಕ್ಷಿ ಯೋಜನೆಗೆ ಬಳಸಲಾದ ವಿದ್ಯುತ್ ಬಿಲ್ ಪಾವತಿಸಲಾಗದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದಿವಾಳಿ ಹಂತ ತಲುಪಿದೆ. ಮೊದಲು ಬಾಕಿ ವಿದ್ಯುತ್ ಬಿಲ್ ಪಾವತಿಸಿ ರೈತರಿಗೆ ನೀರು ಒದಗಿಸಿ ಎಂದು ಉದಯ ಶೆಟ್ಟಿಯವರಿಗೆ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ತಿರುಗೇಟು ನೀಡಿದ್ದಾರೆ.
ತಾಂತ್ರಿಕ ದೋಷದಿಂದ ಕಡಿತಗೊಂಡ ವಿದ್ಯುತ್ ಮರು ಸಂಪರ್ಕಕ್ಕೆ ತಾಂತ್ರಿಕ ದೋಷ ಸರಿ ಪಡಿಸಲು ಇಲಾಖೆಯ ಇಂಜೀನೀಯರ್ ಗಳನ್ನು ಕರೆಯಬೇಕೇ ವಿನಹ ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕರೆ ಮಾಡಿದರೆ ಸರಿಯಾಗುತ್ತದೆಯೇ ಎನ್ನುವ ಕನಿಷ್ಠ ಜ್ಞಾನ ಉದಯ ಶೆಟ್ಟಿಯವರಿಗೆ ಇಲ್ಲವೇ? ವಿದ್ಯುತ್ ಬಾಕಿ ಬಿಲ್ ಪಾವತಿಸದ ಕಾರಣದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎನ್ನುವ ಸತ್ಯವನ್ನು ಮರೆಮಾಚಿ ನಿಮ್ಮ ಸರ್ಕಾರದ ವೈಫಲ್ಯವನ್ನು ಮುಚ್ಚಿಡುವ ಪ್ರಯತ್ನ ಯಾಕೆ ಮಾಡುತ್ತೀರಿ ಎಂದು ಕುಟುಕಿದ್ದಾರೆ.
ಜನವರಿ 2026 ರ ಅಂತ್ಯದ ವರೆಗಿನ ಬಾಕಿ ರೂ.1,87,92,170 ಮೊತ್ತವನ್ನು ತಕ್ಷಣ ಪಾವತಿಸುವಂತೆ ತಪ್ಪಿದಲ್ಲಿ ವಿದ್ಯುತ್ ಕಡಿತದ ನೋಟೀಸು ನೀಡಿದ್ದು ಆ ನಂತರವೂ ಸರ್ಕಾರ ವಿದ್ಯುತ್ ಬಿಲ್ ಪಾವತಿಸದ ಕಾರಣ ಮೂರು ದಿನಗಳ ಹಿಂದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಲಭ್ಯ ಮಾಹಿತಿಯ ಪ್ರಕಾರ ಪೆಬ್ರವರಿ ತಿಂಗಳ ಅಂತ್ಯಕ್ಕೆ ಬಾಕಿ ಮೊತ್ತ 2,090,5000 ಕೋ,ರೂ ತಲುಪಿದ್ದು ಇದು ಸರ್ಕಾರದ ದಿವಾಳಿತನದತ್ತ ಸಾಗುವ ಸೂಚನೆಯೇ ಎಂದು ರವೀಂದ್ರ ಮೊಯ್ಲಿ ಪ್ರಶ್ನಿಸಿದ್ದಾರೆ.


.
.
.
.
.
.
.
.
.
.
