ಕಾರ್ಕಳ:ಮುಡಾ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯ ಹಿಂದೆ ಕೇಂದ್ರ ಸರಕಾರದ ರಾಜಕೀಯ ಕುಮ್ಮಕ್ಕು ಅಡಗಿದೆ. ಬಿಜೆಪಿಯ ಈ ಸಂವಿಧಾನ ವಿರೋಧಿ ನಡೆ ಮುಂದೆ ಬಿಜೆಪಿಗೆ ಮುಳುವಾಗಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಹಿಂದ ವರ್ಗದ ಶಕ್ತಿ ಕೇಂದ್ರವಾಗಿರುವ ನಾಯಕನೊಬ್ಬನ ವಿರುದ್ಧದ ದುರುದ್ಧೇಶಪೂರಿತ ರಾಜಕೀಯ ಷಡ್ಯಂತ್ರ ದೇಶದ ಪ್ರಜಾತಂತ್ರ ವ್ಯವಸ್ಥೆಯ ಆಶಯದಡಿಯಲ್ಲಿ ಸಂತ್ರಸ್ತ ಸಮಾಜದ ಪ್ರಜಾಕ್ರಾಂತಿಗೆ ಕಾರಣವಾದೀತು. ಇದಕ್ಕೆ ಬಿಜೆಪಿ ಬಹಳಷ್ಟು ಬೆಲೆ ತೆರಬೇಕಾದೀತು. ಊರುಗೋಲಿನ ತಾತ್ಕಾಲಿಕ ಸಿಂಹಾಸನದಲ್ಲಿ ಕುಳಿತುಕೊಂಡು ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ದೇಶದ ಸಾಂವಿಧಾನಿಕ ಬದ್ಧತೆಯುಳ್ಳ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ತನ್ನ ಅಧಿಕಾರ ವಿಸ್ತರಿಸುವ ಗುಂಗಿನಲ್ಲಿರುವ ಬಿಜೆಪಿಗೆ ಬಹು:ಶ ದೇಶದ ಶೋಷಿತ ಅಹಿಂದ ವರ್ಗದ ನಾಡಿ ಮಿಡಿತವಾಗಲಿ, ನೆರೆ ದೇಶಗಳ ವರ್ತಮಾನದ ರಾಜಕೀಯ ಪರಿಸ್ಥಿತಿಯ ವಾಸ್ತವತೆಯಾಗಲಿ ಅರ್ಥ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಕರಣದಲ್ಲಿ ಈಗಾಗಲೇ ಲೋಕಾಯುಕ್ತ ತನಿಖೆ ನಡೆಸಿ ರಾಜ್ಯಪಾಲರಿಗೆ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿವಂತೆ ಮನವಿ ಸಲ್ಲಿಸಿದೆ. ಆ ಪ್ರಕರಣವನ್ನು ಹಾಗೆಯ ತನ್ನಲ್ಲಿಟ್ಟುಕೊಂಡ ರಾಜ್ಯಪಾಲರಿಗೆ, ಯಾವುದೇ ಸ್ವಾಯತ್ತ ತನಿಖಾ ಸಂಸ್ಥೆಯಿಂದ ದೂರು ದಾಖಲಾಗದ ಮತ್ತು ಪ್ರಸಕ್ತ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ನಡೆಯುತ್ತಿರುವ ಪ್ರಕರಣದಲ್ಲಿ ಸಿದ್ಧರಾಮಯ್ಯನವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಶನ್ ಒತ್ತಡ ತಂದು ಬಿಜೆಪಿ ತನ್ನ ಬಾಲಕ್ಕೆ ತಾನೇ ಬೆಂಕಿಹಚ್ಚಿಕೊಂಡಿದೆ. ಸಚ್ಚಾರಿತ್ರ್ಯವಂತ ಸಿದ್ಧರಾಮಯ್ಯ ಸಂವಿಧಾನದ ರಕ್ಷಣೆಯಡಿಯಲ್ಲಿ ಗೆದ್ದು ಬರುತ್ತಾರೆ ಎಂದು ಬಿಪಿನ್ ಚಂದ್ರಪಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
`