Share this news

ನವದೆಹಲಿ: ದೇಶದ 41 ವಿಮಾನ ನಿಲ್ದಾಣಗಳಿಗೆ ಮಂಗಳವಾರ ಬಾಂಬ್ ಬೆದರಿಕೆ ಇಮೇಲ್‌ ಬಂದಿದೆ. ಭದ್ರತಾ ಏಜೆನ್ಸಿಗಳು ಗಂಟೆಗಳ ಕಾಲ ನಡೆಸಿದ ತಪಾಸಣೆಯ ನಂತರ ಅದು ಹುಸಿ ಬೆದರಿಕೆ ಎಂದು ದೃಢಪಟ್ಟಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣಗಳಲ್ಲಿ ಮಧ್ಯಾಹ್ನ 12.40 ರ ಸುಮಾರಿಗೆ ಇ-ಮೇಲ್ ಬಂದಿದ್ದು, “KNR” ಎಂದು ಕರೆಯಲಾಗುವ ಆನ್‌ಲೈನ್ ಗುಂಪು ಈ ಸುಳ್ಳು ಬೆದರಿಕೆ ಇಮೇಲ್‌ಗಳ ಹಿಂದೆ ಇದೆ ಎಂದು ಶಂಕಿಸಲಾಗಿದೆ. ಈ ಗುಂಪು ಮೇ 1 ರಂದು ದೆಹಲಿ-ಎನ್‌ಸಿಆರ್‌ನ ಹಲವಾರು ಶಾಲೆಗಳಿಗೆ ಇದೇ ರೀತಿಯ ಇಮೇಲ್‌ ಮಾಡಿತ್ತು ಎನ್ನಲಾಗಿದೆ. ವಿಮಾನ ನಿಲ್ದಾಣಗಳು ಸ್ವೀಕರಿಸಿದ ಇಮೇಲ್‌ಗಳು ಬಹುತೇಕ ಒಂದೇ ರೀತಿಯ ಸಂದೇಶ ಹೊಂದಿದ್ದವು. ಎಲ್ಲಾ ವಿಮಾನ ನಿಲ್ದಾಣಗಳು ಇದು ಹುಸಿ ಬೆದರಿಕೆ ಎಂದು ವರದಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಕೆಲವು ಕಿಡಿಗೇಡಿಗಳು ಬೆದರಿಕೆ ಮೇಲ್ ಕಳುಹಿಸಿದ್ದಾರೆ. ಇಮೇಲ್ ಕಳುಹಿಸಿದ್ದಾರೆ ಎಂದು ನಂಬಲಾದ ವ್ಯಕ್ತಿಗೆ ಐಪಿ ವಿಳಾಸದ ಮೂಲಕ ಲುಕ್ ಔಟ್ ನೋಟಿಸ್ ಕಳುಹಿಸಲಾಗಿದೆ. “ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ ಆದರೆ ಇದುವರೆಗೆ ಯಾವುದೇ ಅನುಮಾನಾಸ್ಪದವಾದದು ಯಾವುದೂ ಕಂಡುಬಂದಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈ, ಪಾಟ್ನಾ ವಿಮಾನ ನಿಲ್ದಾಣದಲ್ಲಿ ಹಲವು ಇಮೇಲ್‌ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ.

ಮತ್ತೊಂದೆಡೆ ಮುಂಬೈನ ಜಸ್ಲೋಕ್, ರಹೇಜಾ, ಸೆವೆನ್ ಹಿಲ್, ಕೊಹಿನೂರ್ ಆಸ್ಪತ್ರೆ ಸೇರಿದಂತೆ 50 ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. VPN ನೆಟ್‌ವರ್ಕ್ ಬಳಸಿ ಈ ಇಮೇಲ್ ಕಳುಹಿಸಲಾಗಿದೆ. ಕಳುಹಿಸುವವರ ಗುರುತು ಮತ್ತು ಬೆದರಿಕೆಯ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

 

 

                        

                          

 

 

 

 

 

                        

                          

 

 

Leave a Reply

Your email address will not be published. Required fields are marked *