ಕಾರ್ಕಳ: ಹೃದಯ ದೇಹಕ್ಕೆ ಹೇಗೆ ಅಗತ್ಯವೋ ಹಾಗೆ ದೇಗುಲವು ಗ್ರಾಮಕ್ಕೆ ಹೃದಯವಿದ್ದಂತೆ,ನಮ್ಮ ಬದುಕಿಗೆ ಸ್ಪಷ್ಟವಾದ ದಾರಿ ತೋರುವುದು ದೇವಾಲಯಗಳು. ದೇವಸ್ಥಾನಗಳು ಸುಭಿಕ್ಷೆಯಾಗಿದ್ದರೆ ಆ ಗ್ರಾಮವು ಸುಭಿಕ್ಷೆಯಾಗಿದೆ ಎಂದರ್ಥ. ಈ ಸ್ಥಳದಲ್ಲಿ ದೇವಿಯ ಸನ್ನಿಧಾನ ಮತ್ತು ಗುರುಗಳ ಸನ್ನಿಧಾನ ಇದೆ. ಜೊತೆಗೆ ತುಳುನಾಡಿನ ಧಾರ್ಮಿಕ ನಂಬಿಕೆಯ ಜೀವಂತಿಕೆಗೆ ಸಾಕ್ಷಿಯಾದ ದೈವ ದೇವರ ಆರಾಧನೆ ಇದೆ. ಸನಾತನ ಸಂಸ್ಕೃತಿಯ ರಕ್ಷಣಾ ಕಾರ್ಯ ಈ ಕ್ಷೇತ್ರದಲ್ಲಿ ನಡೆಯುವಂತಾಗಲಿ ಎಂದು ಉಪ್ಪಳ ಕೊಂಡೆವೂರು ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಅವರು ನೆಲ್ಲಿ ಶ್ರೀ ರಾಜರಾಜೆಶ್ವರಿ ಕ್ಷೇತ್ರದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಸಹ ಕಾರ್ಯನಿರ್ವಾಹಕ, ಆರ್ ಹೊಸದಿಗಂತ ಪತ್ರಿಕೆಯ ಆಡಳಿತ ನಿರ್ದೇಶಕ ಪಿ.ಎಸ್ ಪ್ರಕಾಶ್ ಮಾತನಾಡಿ, ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶದಿಂದ ಸಮಾಜಕ್ಕೆ ಶಕ್ತಿ ತುಂಬುತ್ತದೆ,ಗ್ರಾಮದ ಅಭಿವೃದ್ಧಿಯಾಗುತ್ತದೆ ಎಂದರು. ಈ ಕ್ಷೇತ್ರ ಮುಂದಿನ ಪೀಳಿಗೆಗೆ ಧಾರ್ಮಿಕತೆಯ ಶಕ್ತಿಯಾಗಿ ನಿರ್ಮಾಣವಾಗಿದೆ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬೇವಿನಕೊಪ್ಪ ಮಠದ ವಿಜಯಾನಂದ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಾಸಕ ಸುನಿಲ್ ಕುಮಾರ್, ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರು, ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ದಿನೇಶ್ ಮೆಂಡನ್, ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಯ ಆಯುಕ್ತ ಶ್ರೀಧರ್ ಟಿ,ಎನ್,ಚೇತನ್ ಕೋಟ್ಯಾನ್, ಪ್ರಣಯ್ ನಿಟ್ಟೆ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುನಿಲ್ ಕೆ.ಆರ್ ಸ್ವಾಗತಿಸಿದರು.