ಉಡುಪಿ: ಮದುವೆಯಾಗಲು ನಿರಾಕರಿಸಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಕೋಪಗೊಂಡು ಪಾಗಲ್ ಪ್ರೇಮಿಯೊಬ್ಬ ಯುವತಿಯ ಕತ್ತು ಮತ್ತು ಎದೆಗೆ ಚಾಕುವಿನಿಂದ ಇರಿದು, ಪರಾರಿಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಪ್ರೇಯಸಿಗೆ ಚಾಕುವಿನಿಂದ ಇರಿದಿದ್ದ ಪಾಗಲ್ ಪ್ರೇಮಿ ತಾನು ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಗ್ರಾಮದಲ್ಲಿ ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು, ಪ್ರಿಯಕರ ಕಾರ್ತಿಕ್ ರಕ್ಷಿತಾ ಪೂಜಾರಿ ಹುಟ್ಟುಹಬ್ಬ ದಿನವೇ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಕಾರ್ತಿಕ್ ಹಾಗೂ ರಕ್ಷಿತಾ ಪೂಜಾರಿ ಅಕ್ಕಪಕ್ಕದ ನಿವಾಸಿಗಳಾಗಿದ್ದು, ಕಾರ್ತಿಕ್ ರಕ್ಷಿತಾಳನ್ನು ಪ್ರೀತಿಸುತ್ತಿದ್ದ. ಆದರೆ, ಇಬ್ಬರ ಮದುವೆಗೆ ರಕ್ಷಿತಾಳ ಮನೆಯವರು ಒಪ್ಪಿಕೊಂಡಿಲ್ಲ. ಇದರಿಂದ ರಕ್ಷಿತಾ, ಕಾರ್ತಿಕ್ ಮೊಬೈಲ್ ನಂಬರ್ ಬ್ಲಾಕ್ ಲಿಸ್ಟ್ ಗೆ ಹಾಕಿದ್ದಳು. ಇದರಿಂದ ಕೆರಳಿದ ಕಾರ್ತಿಕ್, ನಿನ್ನೆ ಆಕೆ ಹುಟ್ಟುಹಬ್ಬ ದಿನೇ ಚಾಕುವಿನಿಂದ ಇರಿದು ಪರಾರಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಕ್ಷಿತಾ ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ,
ಇನ್ನು ಪ್ರೇಯಸಿಗೆ ಚಾಕುವಿನಿಂದ ಚುಚ್ಚಿ ಬಳಿಕ ಕಾರ್ತಿಕ್ ಅಲ್ಲೇ ಇದ್ದ ಒಂದು ಬಾವಿಗೆ ಹಾರಿದ್ದಾನೆ. ಪೊಲೀಸರು ಎಲ್ಲೋ ಪರಾರಿಯಾಗಿದ್ದಾನೆಂದು ಹುಡುಕಾಟ ನಡೆಸಿದ್ದರು. ಆದರೆ ಘಟನಾ ಸ್ಥಳದಲ್ಲಿ ಬಾವಿಯಲ್ಲೇ ಕಾರ್ತಿಕನ ಶವ ಪತ್ತೆಯಾಗಿದೆ.