ನವದೆಹಲಿ: ಲೋಕಸಭಾ ಚುನಾವಣೆ ಕಾವು ಏರುತ್ತಿದ್ದು,ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಟಿಕೆಟ್‌ಗಾಗಿ ಕಸರತ್ತು ನಡೆಯುತ್ತಿದ್ದು, ಇದೀಗ ಬಿಜೆಪಿ ತನ್ನ ಮೊದಲ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಹರ್ಯಾಣ ಹಿಸ್ಸಾರ್ ಸಂಸದ ಬ್ರಿಜೇಂದ್ರ ಸಿಂಗ್ ಪಕ್ಷ ತೊರೆದು ಬಿಜೆಪಿಗೆ ಶಾಕ್ ನೀಡಿದ್ದಾರೆ. ಬಿಜೆಪಿಗೆ ಗುಡ್ ಬೈ ಹೇಳಿದ ಬ್ರಿಜೇಂದ್ರ ಸಿಂಗ್ ಇದೀಗ ಕಾಂಗ್ರೆಸ್ ಸೇರಿದ್ದಾರೆ. ಹಿಸ್ಸಾರ್ ಕ್ಷೇತ್ರದ ಹಾಲಿ ಸಂಸದರಾಗಿರುವ ಬ್ರಿಜೇಂದ್ರ ಸಿಂಗ್ ರಾಜೀನಾಮೆ ರಾಜಕೀಯ ವಲಯದಲ್ಲಿ ತೀವೃ ಸಂಚಲನ ಸೃಷ್ಟಿಸಿದೆ.
ಕೆಲ ರಾಜಕೀಯ ಕಾರಣಗಳಿಂದ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಹಿಸ್ಸಾರ್ ಕ್ಷೇತ್ರದ ಸಂಸದನಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಪಕ್ಷಕ್ಕೆ ಹಾಗೂ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗೆ ಕೃತಜ್ಞತೆಗಳು ಎಂದು ಬ್ರಿಜೇಂದ್ರ ಸಿಂಗ್ ಟ್ವೀಟ್ ಮಾಡಿದ್ದಾರೆ. ಬಿಜೆಪಿಯಲ್ಲಿ ನನಗೆ ತೃಪ್ತಿ ಇರಲಿಲ್ಲ, ಕೆಲ ವಿಚಾರಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ನೋವು ತಂದಿದೆ ಎಂದು ಬ್ರಿಜೇಂದ್ರ ಸಿಂಗ್ ಹೇಳಿದ್ದಾರೆ. ಬಿಜೆಪಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿರುವ ಬ್ರಿಜೇಂದ್ರ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಧನ್ಯವಾದ ಹೇಳಿದ್ದಾರೆ. ರೈತ ಪ್ರತಿಭಟನೆ, ಕುಸ್ತಿಪಟುಗಳ ಪ್ರತಿಭಟನೆ ವೇಳೆ ಬಿಜೆಪಿ ನಡೆದುಕೊಂಡ ರೀತಿ ಅಸಮಾಧಾನ ತಂದಿದೆ. ಹೀಗಾಗಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.
ಐಎಎಸ್ ಅಧಿಕಾರಿಯಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಬ್ರಿಜೇಂದ್ರ ಸಿಂಗ್ ನಿವೃತ್ತಿ ಪಡೆದು ರಾಜಕೀಯ ಪ್ರವೇಶ ಮಾಡಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದ ಹಿಸ್ಸಾರ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದ ಬ್ರಿಜೇಂದ್ರ ಸಿಂಗ್, ಅಭೂತಪೂರ್ವ ಗೆಲುವು ದಾಖಲಿಸಿದ್ದರು. ಬಿಜೆಪಿಯ ಹಿರಿಯ ನಾಯಕ ಚೌಧರಿ ಬೀರೇಂದ್ರ ಸಿಂಗ್ ಪುತ್ರ, ಬ್ರಿಜೇಂದ್ರ ಸಿಂಗ್ ಇದೀಗ ಕಾಂಗ್ರೆಸ್ ಸೇರಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಬ್ರಿಜೇಂದ್ರ ಸಿಂಗ್ ತಾಯಿ ಪ್ರೇಮಲತಾ ಹರ್ಯಾಣದಲ್ಲಿ ಬಿಜೆಪಿ ಶಾಸಕರಾಗಿದ್ದಾರೆ.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.






