Share this news

ಕುಂದಾಪುರ: ಮನೆಯ ಸಮೀಪದ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ಮಾರಕಾಯುಧಗಳೊಂದಿಗೆ ಬಂದ ದುಷ್ಕರ್ಮಿಗಳ ತಂಡವೊಂದು ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು‌ ಮತ್ತವರ ಸ್ನೇಹಿತರಿಗೆ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿನ್ ಆಲೂರು, ಶರತ್ ದೇವಾಡಿಗ ಆಲೂರು (24), ವಿಶ್ವನಾಥ ಪಡುಕೋಣೆ, ರೋಶನ್ ಫೆರ್ನಾಂಡೀಸ್, ಪ್ರದೀಪ್ ಪಡುಕೋಣೆ, ಕಾರ್ತಿಕ್‌ ಪೂಜಾರಿ, ಪ್ರಕಾಶ್ ಮೊಗವೀರ, ಕೀರ್ತಿಕ್ ಪೂಜಾರಿ, ಗಣೇಶ್ ಪೂಜಾರಿ, ವಿಶಾಲ್, ಗೌತಮ್, ಸಂತೋಷ್ ನಾಡ, ಮಹೇಂದ್ರ, ಜಗದೀಶ್ ಮೊಗವೀರ, ಸಂತೋಷ್ ಹಡವು, ಅಂಕಿತ್ ಪೂಜಾರಿ, ಶಿವರಾಜ್, ಸಾಧನ್ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಆಲೂರು ಹೊಯ್ಯಾಣ ನಿವಾಸಿ ಸಚಿನ್ (24), ಆಲೂರು ರಾಮೇಶ್ವರ ನಗರ ನಿವಾಸಿ ಶರತ್ ದೇವಾಡಿಗ (24), ಕೆಂಬೈಲು ನಿವಾಸಿ‌ಗಳಾದ ಕಾರ್ತಿಕ್ (22), ಹಾಗೂ ಕೀರ್ತಿಕ್ (20), ಪಡುಕೋಣೆ‌ ನಿವಾಸಿ ಪ್ರಕಾಶ್ (20), ಪಡುಕೋಣೆಯ ಹನುಮಂತನಗರ ನಿವಾಸಿ ಜಗದೀಶ್ (31), ಪಡುಕೋಣೆ ರಾಮಮಂದಿರ ನಿವಾಸಿ ಗೌತಮ್ (23), ಪಡುಕೋಣೆ ನಿವಾಸಿ‌ ಮಹೇಂದ್ರ ಪೂಜಾರಿ, ಹಡವು ನಿವಾಸಿ‌ ಸಂತೋಷ್ ಮೊಗವೀರ, ರೋಶನ್‌ ಫೆರ್ನಾಂಡೀಸ್, ಆಲೂರು ನಿವಾಸಿ ಪ್ರಸಾದ್ ಆಚಾರ್ಯ (30) ಬಂಧಿತ ಆರೋಪಿಗಳು. ಆರೋಪಿಗಳಲ್ಲಿ ಇಬ್ಬರು ಸಂಘರ್ಷಕ್ಕೊಳಗಾದ ಬಾಲಕರು ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ‌. ಬಂಧಿತ ಆರೋಪಿಗಳಿಂದ 1 ಏರ್ ಪಿಸ್ತೂಲ್, 4 ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ‌.

ಘಟನೆಯ ವಿವರ :

ಕಳೆದ ಐದು ದಿನಗಳ‌ ಹಿಂದೆ ಪಡುಕೋಣೆ ನಿವಾಸಿ ಶ್ರೀಕಾಂತ ಪೂಜಾರಿ ಹಡವು ಗ್ರಾಮದ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ಸಂಜೆ ಸ್ನೇಹಿತರಾದ ಅರವಿಂದ ಪೂಜಾರಿ, ಚಂದ್ರ ಪಡುಮನೆ, ಸುರೇಶ, ಶಿವ ಕುಮಾರ್ ಹೆಬ್ಬಾರ್ ಮತ್ತವರ ಮಗ ಮನು ಹೆಬ್ಬಾರ್, ಸುದೇಶ್ ಶೆಟ್ಟಿ ಜೊತೆಯಲ್ಲಿ ಮಾತನಾಡುತ್ತಾ ನಿಂತುಕೊಂಡಿದ್ದ ವೇಳೆ ಆರೋಪಿಗಳು ಏಕಾಏಕಿ ಮಾರಕಾಯುಧಗಳಿಂದ ಬಂದು ಹಲ್ಲೆಗೆ ಯತ್ನಿಸಿದ್ದಾರೆ‌‌.

ಆರೋಪಿ ಸಚಿನ್ ಪೂಜಾರಿ, ಶರತ್ ಸೇರಿದಂತೆ ಆರೋಪಿಗಳ ತಂಡ ಪಿಸ್ತೂಲ್, ಕಬ್ಬಿಣದ ಪೈಪ್ ಗೆ ತುದಿಯಲಿ ಹಲ್ಲುಗಳುಳ್ಳ ಚಕ್ರ ಇರುವ ಆಯುಧ, ಕಬ್ಬಿಣದ ರಾಡ್, ಮರದ ಸೊಂಟೆ ಇತ್ಯಾದಿ ಮಾರಕಾಯುಧಗಳನ್ನು ಹಿಡಿದು ಮಾರಕಾಯುಧಗಳನ್ನು ಬೀಸುತ್ತಾ ಬೆದರಿಸಿದ್ದಾರೆ. ಶ್ರೀಕಾಂತ ಹಾಗೂ ಸ್ನೇಹಿತರು ಅಲ್ಲೆ ಸ್ವಲ್ಪ ದೂರ ಹೋಗಿ ನಿಂತಿದ್ದು, ಶಿವಕುಮಾರ್ ಹೆಬ್ಬಾರ್ ಹಾಗೂ ಅವರ ಮಗ ಮನು ರವರು ಆರೋಪಿತರನ್ನು ಎದುರಿಸಲು ಹೋದಾಗ ಅವರಿಗೆ ಆರೋಪಿ ವಿಶ್ವನಾಥ ಪಡುಕೋಣೆ, ರೋಶನ್ ಫೆರ್ನಾಂಡಿಸ್, ಪ್ರವೀಣ ಪಡುಕೋಣೆ ತಮ್ಮಲ್ಲಿದ್ದ ಮಾರಕಾಯುಧಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಪರಿಣಾಮ ಶಿವಕುಮಾರ್ ಹೆಬ್ಬಾರ್ ಅವರ ಕೈ ಕಾಲಿಗೆ ಗಾಯಗಳಾಗಿ, ಮನು ಹೆಬ್ಬಾರ್ ತಲೆಗೆ ಗಾಯಗಳಾಗಿದೆ.

ಆರೋಪಿಗಳು ಅಲ್ಲೇ ಸಮೀಪದಲ್ಲಿ ನಿಂತಿದ್ದ ಸುದೇಶ್ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಅವರಿಗೂ ಆರೋಪಿ ಸಚಿನ್ ಪೂಜಾರಿ ನೀವು ಗಲಾಟೆ ಮಾಡಲು ಬಂದವರಾ? ಇದು ಲೈಸನ್ಸ್ ಇಲ್ಲದೇ ಇರುವ ಪಿಸ್ತೂಲ್. ನಿಮ್ಮನ್ನು ಕೊಂದು, ಪಿಸ್ತೂಲ್ ಬಿಸಾಕಿ ಹೋಗುತ್ತೇನೆ. ಯಾರಿಂದಲೂ ಏನೂ ಮಾಡಲು ಆಗೋದಿಲ್ಲ. ಗಲಾಟೆ ಮಾಡುವುದಿದ್ದರೇ ನಿಮಗೆ ಈಗಲೇ ಶೂಟ್ ಮಾಡಿ ಸಾಯಿಸುವುದಾಗಿ ಪಿಸ್ತೂಲ್ ತಲೆಗೆ ಹಿಡಿದು ಜೀವ ಬೆದರಿಕೆ ಹಾಕಿದ್ದಾನೆ. ಜೀವಭಯದಿಂದ ಶ್ರೀಕಾಂತ ಓಡಲೆತ್ನಿಸಿದಾಗ ಆರೋಪಿ ಸಚಿನ್ ಪೂಜಾರಿ ಅಡ್ಡಗಟ್ಟಿ ತನ್ನ ಕೈಯಲ್ಲಿದ್ದ ಪಿಸ್ತೂಲ್ ಅನ್ನು ಶ್ರೀಕಾಂತ್ ತಲೆಗೆ ಗುರಿ ಹಿಡಿದು ಶೂಟ್ ಮಾಡಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೇ ಕೈಯಿಂದ ಕೆನ್ನೆ, ತಲೆಗೆ ಹೊಡೆದು ಹಲ್ಲೆ ಮಾಡಿದ್ದಾನೆ ಎಂದು ಶ್ರೀಕಾಂತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಶ್ರೀಕಾಂತ್ ಹಾಗೂ ಆರೋಪಿ ವಿಶ್ವನಾಥ ಪಡುಕೋಣೆ ಹಾಗೂ ಇತರರ ಮಧ್ಯೆ ಹಳೆಯ ದ್ವೇಷ ಇದ್ದು, ಅದೇ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗಂಗೊಳ್ಳಿ ಠಾಣಾಧಿಕಾರಿ ಹರೀಶ್ ಆರ್ ನಾಯ್ಕ್, ಅಪರಾಧ ವಿಭಾಗದ ಪಿಎಸ್ಐ ಬಸವರಾಜ್ ಕನಶೆಟ್ಟಿ, ಸಿಬ್ಬಂದಿಗಳಾದ ನಾಗರಾಜ, ಕೇಶವ, ಸಂದೀಪ, ರಾಘವೇಂದ್ರ, ರಾಷ್ಟ್ರಪತಿ, ಚಾಲಕ ಸುಧೀರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

 

 

Leave a Reply

Your email address will not be published. Required fields are marked *