ಚಿಕ್ಕಮಗಳೂರು: ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಸಂಕಷ್ಟ ಎದುರಾಗಿದ್ದು ತಾವು ಕಳೆದ ಬಾರಿ ಸ್ಪರ್ಧಿಸಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ವಪಕ್ಷೀಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬಾರಿ ಚುನಾವಣೆಯಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡುವ ಬದಲಿಗೆ ಬೇರೊಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹೈಕಮಾಂಡ್ ನಾಯಕರಿಗೆ ಹಲವಾರು ಪತ್ರಗಳನ್ನು ಕಳಿಸಿ ಆಕ್ರೋಶ ಹೊರಹಾಕಿದ್ದಾರೆ. ಬುಧವಾರ ಚಿಕ್ಕಮಗಳೂರು ನಗರದ ಪ್ರಧಾನ ಅಂಚೆ ಕಚೇರಿಯ ಬಳಿ ಅಂಚೆ ಪೆಟ್ಟಿಗೆಗೆ ಪತ್ರಗಳನ್ನು ಹಾಕುವ ಮೂಲಕ ಶೋಭಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೆ.ಪಿ.ನಡ್ಡಾ ಸೇರಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿಳಾಸಕ್ಕೂ ಪತ್ರಗಳನ್ನು ಕಳಿಸಿಕೊಡಲಾಗಿದೆ. ಶೋಭಾ ಕರಂದ್ಲಾಜೆ ಸ್ಪರ್ಧೆ ವಿರೋಧಿಸಿ ಕಳೆದ ಲೋಕಸಭೆ ಚುನಾವಣೆ ವೇಳೆ ಗೋಬ್ಯಾಕ್ ಶೋಭಾ ಅಭಿಯಾನ ನಡೆಸ ಲಾಗಿತ್ತು. ಕೆಲವು ದಿನಗಳ ಬಳಿಕ ಅಭಿಯಾನ ತೆರೆಮರೆ ಸರಿದಿತ್ತು.ಶೋಭಾ ಕರಂದ್ಲಾಜೆ ಬಿಜೆಪಿ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿ ಎರಡನೇ ಬಾರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾಗಿ ಮೋದಿ ಸಂಪುಟದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾದರು. ಶೋಭಾ ಕರಂದ್ಲಾಜೆ ಎರಡು ಬಾರಿ ಆಯ್ಕೆಯಾಗಿದ್ದು ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿಲ್ಲ. ಈ ಹಿನ್ನಲೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡ ಬಾರದು. ಹೊಸ ಮುಖಕ್ಕೆ ಟಿಕೆಟ್ ನೀಡಬೇಕು ಎಂದು ಪತ್ರ ಬರೆದಿದ್ದಾರೆ.ಲೋಕಸಭೆ ಚುನಾವಣೆ ಘೋಷಣೆ ಬಾಕಿ ಇದೆ. ಉಡುಪಿ -ಚಿಕ್ಕಮಗಳೂರು ಕ್ಷೇತ್ರದಿಂದ ಕೆಲವು ಹೆಸರುಗಳು ಕೇಳಿ ಬರುತ್ತಿದ್ದು ತರೆಮರೆಯಲ್ಲಿ ಬಾರೀ ಕಸರತ್ತು ನಡೆಯುತ್ತಿದೆ. ತುಮಕೂರು ಮತ್ತು ಜಿಲ್ಲೆಯ ನರಸಿಂಹರಾಜಪುರ ತಾಲೂಕಿ ನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶೋಭಾ ಕರಂದ್ಲಾಜೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಪಕ್ಷ ಬದಲಾವಣೆ ಬಯಸಿದಲ್ಲಿ ಅದನ್ನು ಪಾಲಿಸಿ ತೀರ್ಮಾನಕ್ಕೆ ಬದ್ದವಾಗಿದ್ದೇನೆ ಎಂದಿದ್ದಾರೆ.ಬಿಜೆಪಿ ಜೆಡಿಎಸ್ ಮೈತ್ರಿಯಾಗಿದ್ದು ಯಾವ ಪಕ್ಷದ ವರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಎಂದು ಖಾತ್ರಿಯಾಗಿಲ್ಲ. ಸ್ವ ಪಕ್ಷದ ಕಾರ್ಯಕರ್ತರೇ ಈ ನಡುವೆ ಶೋಭಾ ಕರಂದ್ಲಾಜೆ ವಿರುದ್ದ ಹೈಕಮಾಂಡ್ ಗೆ ಪತ್ರ ರವಾನಿಸಿರುವುದು ಬಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.