ಉಡುಪಿ:ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಮಗು ಬಿದ್ದ ಪ್ರಕರಣದಿಂದ ರಾಜ್ಯಕ್ಕೆ ರಾಜ್ಯವೇ ಆತಂಕಪಡುವ ಘಟನೆ ನಡೆದಿದೆ. ಬೋರ್ ಕೊರೆಸುವವರ ನಿರ್ಲಕ್ಷ್ಯದ ಪರಿಣಾಮ ಇಂತಹ ದುರ್ಘಟನೆ ಸಂಭವಿಸಿದ್ದು,ಈ ವಿಚಾರವಾಗಿ ಜಿಲ್ಲಾಡಳಿತಗಳು ಎಚ್ಚೆತ್ತುಕೊಳ್ಳಬೇಕಿದೆ.
ಬಿರುಬೇಸಗೆಯ ಸಂದರ್ಭದಲ್ಲಿ ಕೃಷಿ ಜಮೀನಿಗೆ ಹಾಗೂ ಕುಡಿಯುವ ನೀರಿಗಾಗಿ ಬೋರ್ ವೆಲ್ ಕೊರೆಸುವವರ ಸಂಖ್ಯೆ ಹೆಚ್ಚುತ್ತಿದೆ.ಅದಕ್ಕೆ ತಕ್ಕಂತೆ ಬೋರ್ ವೆಲ್ ಮಾಲಕರು ಇದೇ ಅವಕಾಶವನ್ನು ಬಳಸಿ ಹಣ ಮಾಡುವ ದಂಧೆಯನ್ನಾಗಿಸಿದ್ದಾರೆ.ಬೋರ್ ವೆಲ್ ಕೊರೆಸಲು ಸರ್ಕಾರ ಈ ಹಿಂದೆ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಿದ್ದರೂ ಹಲವೆಡೆ ಜಿಲ್ಲಾಡಳಿತಗಳು ಪರಿಣಾಮಕಾರಿಯಾಗಿ ಪಾಲಿಸದ ಹಿನ್ನೆಲೆಯಲ್ಲಿ ಇಂತಹ ದುರಂತ ಸಂಭವಿಸಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಇಂತಹ ದುರ್ಘಟನೆ ಸಂಭವಿಸುವುದನ್ನು ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಸುಮಾರು 20 ಕ್ಕೂ ಅಧಿಕ ಬೋರ್ ಕೊರೆಸುವ ಯಂತ್ರಗಳು ನಿತ್ಯ ಅಂದಾಜು 40 ಕ್ಕೂ ಅಧಿಕ ಕೊಳವೆ ಬಾವಿ ಕೊರೆಯುತ್ತಿವೆ. ಆದರೆ ಕೊಳವೆ ಬಾವಿ ಕೊರೆಸುವ ಯಂತ್ರಗಳು ಸರ್ಕಾರದಿಂದ ಕಡ್ಡಾಯವಾಗಿ 7A ದೃಢೀಕರಣ ಪಡೆಯಬೇಕು. ಆದರೆ ಕೆಲವು ರಿಗ್ ಮಾಲಕರು 7A ಪ್ರಮಾಣ ಪತ್ರ ಪಡೆಯದೇ ಸ್ಥಳೀಯಾಡಳಿತ ಹಾಗೂ ಅಂತರ್ಜಲ ಪ್ರಾಧಿಕಾರದ ಅನುಮತಿಯನ್ನು ಪಡೆಯದೇ ಕೊಳವೆ ಬಾವಿ ಕೊರೆಸುತ್ತಿರುವ ಕುರಿತು ಆರೋಪಗಳು ಕೇಳಿಬಂದಿದೆ. ಇಂತಹ ಸಂದರ್ಭಗಳಲ್ಲಿ ಬೋರ್ ಬೆಲ್ ನೀರು ಬರದೇ ವೈಫಲ್ಯವಾದರೆ ಕೇಸಿಂಗ್ ಪೈಪ್ ತೆಗೆದು ಗುಂಡಿ ಮುಚ್ಚದೇ ಇರುವ ಪ್ರಕರಣಗಳು ನಡೆಯುವ ಸಾಧ್ಯತೆಯಿದೆ. ಆದ್ದರಿಂದ ಕೊಳವೆ ಬಾವಿ ಕೊರೆಸುವ ಜಮೀನು ಮಾಲೀಕರು ಹಾಗೂ ರಿಗ್ ಮಾಲೀಕರಿಗೆ ಕಠಿಣ ನಿಯಮಾವಳಿಗಳನ್ನು ರೂಪಿಸಲೇಬೇಕಿದೆ. ಅನಧಿಕೃತವಾಗಿ ಕೊಳವೆ ಬಾವಿ ಕೊರೆಸುವವರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮದ ಎಚ್ಚರಿಕೆ ನೀಡಿದರೆ ಇಂತಹ ದುರ್ಘಟನೆಗಳನ್ನು ತಡೆಗಟ್ಟಬಹುದಾಗಿದೆ.