Share this news

ಕಾರ್ಕಳ,ಸೆ 24: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಗಣತಿ ಸಮೀಕ್ಷೆಗೆ ಕಾರ್ಕಳ ತಾಲೂಕಿನಲ್ಲಿ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಗಣತಿಗೆ ನಿಯೋಜನೆಗೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕ/ಶಿಕ್ಷಕಿಯರು ತಮಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಕಳ ತಹಶೀಲ್ದಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಇದಲ್ಲದೇ ಗಣತಿ ಸಂದರ್ಭದಲ್ಲಿ ಶಿಕ್ಷಕರಿಗೆ ಎದುರಾಗುವ ತಾಂತ್ರಿಕ ಸಮಸ್ಯೆಗಳು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ತಾಲೂಕು ಕಚೇರಿ ಮುಂಭಾಗ ಆಹೋರಾತ್ರಿ ಉಪವಾಸ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ.
ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘ, ಕಾರ್ಕಳ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್ ಅವರಿಗೆ ಮನವಿ ಸಲ್ಲಿಸಿದ ಶಿಕ್ಷಕರ ನಿಯೋಗ  ಬೇಡಿಕೆಗಳ ಪಟ್ಟಿ ಮುಂದಿಟ್ಟಿದೆ.

 

ಬೇಡಿಕೆಯ ಪ್ರಮುಖ ಅಂಶಗಳು:

  1. ಇದೇ ಏಪ್ರಿಲ್ ನಲ್ಲಿ ಮಾಡಿರುವ ಪರಿಶಿಷ್ಟ ಜಾತಿ ಒಳಮಿಸಲಾತಿ ಗಣತಿಯ ಗಣತಿದಾರರಿಗೆ ಈವರೆಗೂ ಗೌರವಧನ ಹಾಗೂ ನ್ಯಾಯ ಬದ್ಧವಾಗಿ ಸಿಗಬೇಕಾದ ಗಳಿಕೆ ರಜೆ ಹಾಜರಾತಿ ಪ್ರಮಾಣ ಪತ್ರ ಸಿಕ್ಕಿಲ್ಲ ಅದನ್ನು ತಕ್ಷಣವೇ ನೀಡಬೇಕು
  2. ಗಣತಿ ಕಾರ್ಯದಲ್ಲಿ ಅನುಕೂಲ ವಾಗುವ ಅವರ ಶಾಲಾ ಸ್ಥಳ ಅಥವಾ ಅಲ್ಲಿಯೇ ಅಕ್ಕಪಕ್ಕದ ಏರಿಯಾಗಳಲ್ಲಿ ಗಣತಿ ಮಾಡುವಂತೆ ನೋಡಿಕೊಳ್ಳಬೇಕು
  3. ಎಲ್ಲಾ ಇಲಾಖೆಯ ನೌಕರರನ್ನು ಸರಕಾರದ ಆದೇಶ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗಣತಿಗೆ ಬಳಸಿಕೊಳ್ಳಬೇಕು
  4. ಪ್ರೌಢಶಾಲಾ ಶಿಕ್ಷಕರನ್ನು ಕೊನೆಯ ಆದ್ಯತೆಯ ನೆಲೆಯಲ್ಲಿ ಪರಿಗಣಿಸಬೇಕು
  5. BLO ಗಣತಿದಾರರನ್ನು ಈ ಕಾರ್ಯದಿಂದ ತಕ್ಷಣವೇ ಕೈಬಿಡಬೇಕು
  6. ಗಣತಿಯ ಆಪ್ ನಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆಯನ್ನು ಕೂಡಲೇ ಸರಿಪಡಿಸಬೇಕು ಗಣತಿದಾರರಿಗೆ ಗಣತಿ ಪ್ರದೇಶದ ಮನೆ ಪ್ರದೇಶದ ಪಟ್ಟಿಯ ಹಾರ್ಡ್ ಪ್ರತಿಯನ್ನು ತಕ್ಷಣ ಒದಗಿಸಬೇಕು
  7. ಗಣಿತಿದಾರರಿಗೆ ತಮ್ಮ ಶಾಲೆ ಅಥವಾ ಅನುಕೂಲವಾಗುವ ಪ್ರದೇಶದಲ್ಲಿ ಗಣತಿಗೆ ನಿಯೋಜಿಸಬೇಕು
  8. ಮಹಿಳಾ ಗಣತಿದಾರರಿಗೆ ದೂರದ ದುರ್ಗಮ ಪ್ರದೇಶಕ್ಕೆ ನಿಯೋಜಿಸದೇ ಅವರಿಗೆ ಅನುಕೂಲವಾಗುವ ಸ್ಥಳದಲ್ಲಿ ಗಣತಿಗೆ ಅವಕಾಶ ಮಾಡಿಕೊಡಬೇಕು
  9. ಗಣತಿಗೆ ಹೆಚ್ಚುವರಿ ಮನೆಗಳ ಬದಲಿಗೆ ಮನೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು
  10. ಗಣತಿಗೆ ನೀಡಿರುವ ಮನೆಗಳ ಒಂದೇ ಪ್ರದೇಶಕ್ಕೆ ಸಂಬಂಧಪಟ್ಟದಾಗಿರಬೇಕು ಹಾಗೂ ದಿನಕ್ಕೆ ಇಂತಿಷ್ಟೇ ಮನೆಗಳು ಮಾಡಬೇಕು ಎನ್ನುವ ಒತ್ತಡ ಹೇರಬಾರದು
  11. ಗಣತಿ ಕುರಿತು ಗ್ರಾಮ ಪಂಚಾಯತ್ ಮೂಲಕ ಪ್ರತಿ ಮನೆಮನೆಗೂ ಮಾಹಿತಿ ಹಾಗೂ ಮನವರಿಕೆ ಮಾಡಿ ಗಣತಿ ಕಾರ್ಯದ ಯಶಸ್ಸಿಗೆ ಸಹಕರಿಸಬೇಕು ಎನ್ನುವ ಬೇಡಿಕೆಗಳನ್ನು ಸಲ್ಲಿಸಲಾಗಿದೆ

ಶಿಕ್ಷಕರ ಮನವಿ ಸ್ವೀಕರಿಸಿದ ಬಳಿಕ ತಹಸೀಲ್ದಾರ್ ಪ್ರದೀಪ್ ,ಆರ್ ಮಾತನಾಡಿ, ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ನಿವೃತ್ತಿಯ ಅಂಚಿನಲ್ಲಿರುವ ನೌಕರರು, ವಿಕಲಚೇತನ ಹಾಗೂ ಗರ್ಭಿಣಿಯರು ಹಾಗೂ ಆರೋಗ್ಯ ಸಮಸ್ಯೆ ಇರುವ ಶಿಕ್ಷಕರನ್ನು ಗಣತಿನ ಕಾರ್ಯದಿಂದ ಕೈಬಿಡುವ ಭರವಸೆ ನೀಡಿದರು. ಗಣತಿ ಆ್ಯಪ್ ನಲ್ಲಿ ಎದುರಾಗುತ್ತಿರುವ ತಾಂತ್ರಿಕ ತೊಂದರೆಗಳನ್ನು ಸರಿಪಡಿಸುವ ಭರವಸೆ ಸೇರಿದಂತೆ ಹಲವು ಬೇಡಿಕೆಗಳಿಗೆ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಾತಿ ಗಣತಿ ಸಮೀಕ್ಷೆ ನೋಡಲ್ ಅಧಿಕಾರಿ ಚಂದ್ರಶೇಖರ ನಾಯಕ್ , ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉಪಸ್ಥಿತರಿದ್ದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *