ಮಂಗಳೂರು: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿಯ ವೈಭವ ಮೇಳೈಸಿದೆ. ಚಂಪಾಷಷ್ಠಿಯ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯನು, ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ಗುರುವಾರ ದರ್ಶನ ನೀಡಿದ್ದಾನೆ. ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾ ಮಹೋತ್ಸವ ಆರಂಭವಾದರೆ, ಡಿ.15 ಕೊಪ್ಪರಿಗೆ ಇಳಿಸುವುದರ ಮೂಲಕ ಜಾತ್ರಾ ಉತ್ಸವ ಸಮಾಪನಗೊಳ್ಳಲಿದೆ. ಡಿ.9ರಂದು ಚಂಪಾಷಷ್ಠಿಯ ವೈಭವದ ಬ್ರಹ್ಮ ರಥೋತ್ಸವ ಕ್ಷೇತ್ರದಲ್ಲಿ ಜರುಗಲಿದೆ.
ಚಂಪಾ ಷಷ್ಠಿಯ ದಿನ ನಡೆಯುವ ಬ್ರಹ್ಮರಥ ಬಹಳ ವಿಶೇಷತೆಯನ್ನು ಒಳಗೊಂಡಿದೆ. ಈ ರಥ ಕೇವಲ ಬಿದಿರು ಹಾಗೂ ನಾಗರ ಬೆತ್ತದಿಂದಲೇ ರೂಪುಗೊಳ್ಳುತ್ತದೆ. ಮತ್ತು ಸುಬ್ರಹ್ಮಣ್ಯನು ಏರುವ ರಥ ಸಿದ್ಧಪಡಿಸುವುದು ಮಲೆಕುಡಿಯರೇ ಅನ್ನೋದು ವಿಶೇಷತೆಯಾಗಿದೆ. ಈ ಹಿನ್ನಲೆಯಲ್ಲಿ ಈ ರಥ ರಾಜ್ಯದಲ್ಲೇ ಇರುವ ಎಲ್ಲಾ ಕ್ಷೇತ್ರಗಳ ರಥಗಳಿಗಿಂತ ವಿಶಿಷ್ಟವಾಗಿದೆ.
ಅಮೆರಿಕಾದ ನಿಯೋಜಿತ ಡೊನಾಲ್ಡ್ ಟ್ರಂಪ್ಅವರ ಬಿಸಿನೆಸ್ ಪಾರ್ಟ್ನರ್ ಶಶಿಭೂಷಣ್ ಭೇಟಿ ನೀಡಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಶಶಿಭೂಷಣ್ ಅಮೆರಿಕಾದಲ್ಲಿ 500 ಎಕರೆ ಜಾಗದಲ್ಲಿ 3000 ಕೋಟಿ ವೆಚ್ಚದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ಮತ್ತು ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಶಶಿಭೂಷಣ್ ಅವರು ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ‘ಎ’ ಪ್ಯಾಕ್ ಮುನ್ನೆಡಿಸಿದ್ದಾರೆ. ಟ್ರಂಪ್ ಗೆಲುವಿನಲ್ಲಿ ಎ ಪ್ಯಾಕ್ ಸಾಕಷ್ಟು ಶ್ರಮ ವಹಿಸಿದೆ.
ಸುಬ್ರಮಣ್ಯ ಸ್ವಾಮಿ ದರ್ಶನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಬಂದು ಪುಳಕಿತನಾಗಿದ್ದೇನೆ. ಸನಾತನ ಧರ್ಮ ಉಳಿಸಲು ಅಮೇರಿಕಾದಲ್ಲಿ 500 ಎಕರೆ ಜಾಗದಲ್ಲಿ ಸನಾತನ ಧಾರ್ಮಿಕ ಕೇಂದ್ರ ಕಟ್ಟಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರಿಂದ ಸನಾತನ ಧರ್ಮಕ್ಕೆ ಒಳ್ಳೆಯದಾಗಲಿದೆ ಎಂದರು.