ಬಾಗಲಕೋಟೆ, ಅ,13: ರಾಜ್ಯದಲ್ಲಿ ಆರೆಸೆಸ್ಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿದ್ದು, ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಅದೇ ರೀತಿ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ಹೇಳಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಇತ್ತ ರಾಜ್ಯದಲ್ಲಿ ಆರೆಸೆಸ್ಸ್ ಚಟುವಟಿಕೆ ನಿಷೇಧಿಸುವಂತೆ ಸಿಎಂಗೆ ತಾವು ಪತ್ರ ಬರೆದಿರುವ ವಿಚಾರವನ್ನು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆರೆಸ್ಸೆಸ್ ಕಡು ವಿರೋಧಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಿಜಿಸ್ಟರ್ ಆಗಿರುವ ದಾಖಲೆ ತೋರಿಸಿ ಎಂದು ಸವಾಲು ಹಾಕಿದರು. ಆರೆಸೆಸ್ಸ್ ನಿಷೇಧಿಸಿದರೆ ಬಿಜೆಪಿ ಪಕ್ಷ ಅಸ್ತಿತ್ವದಲ್ಲೇ ಇರಲ್ಲ ಎಂದಿದ್ದಾರೆ. ಆರೆಸ್ಸೆಸ್ ಚಟುವಟಿಕೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.
ತಾಕತ್ತಿದ್ರೆ ಇದ್ದರೆ ಆರೆಸೆಸ್ಸ್ ನಿಷೇಧ ಮಾಡಿ: ಛಲವಾದಿ ನಾರಾಯಣಸ್ವಾಮಿ ಗುಡುಗು
ದೇಶಭಕ್ತ ಸಂಘಟನೆಯಾಗಿರುವ ಆರೆಸೆಸ್ಸ್ ಕಾರ್ಯಚಟುವಟಿಕೆಗಳನ್ನು ನಿಷೇಧಿಸಲು ಸರ್ಕಾರ ಮುಂದಾಗಿದ್ದು, ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಆರೆಸ್ಸೆಸ್ ನಿಷೇಧ ಮಾಡಿ ನೋಡಿ ಎಂದು ಸವಾಲು ಹಾಕಿದ್ದಾರೆ. ಈ ಹಿಂದೆಯೂ ನಿಷೇಧಕ್ಕೆ ಕೈಹಾಕಿ ಬಳಿಕ ವಾಪಸ್ ತೆಗೆದುಕೊಂಡಿದ್ದರು. ಕಲುಷಿತ ಮನಸ್ಸುಗಳ ಮಧ್ಯೆಯೂ ಆರೆಸೆಸ್ಸ್ ಶತಮಾನೋತ್ಸವ ಆಚರಿಸಿರುವ ಕಾರಣಕ್ಕೆ ಇವರಿಗೆ ಉರಿ ಆರಂಭವಾಗಿದೆ ಎಂದು ಕಿಡಿಕಾರಿದ್ದಾರೆ.