ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 87 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಟಿ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಅವ್ಯವಹಾರದಲ್ಲಿ ಸಚಿವ ಬಿ. ನಾಗೇಂದ್ರ ಅವರ ಹೆಸರು ಕೇಳಿಬಂದಿದ್ದು, ಕೂಡಲೆ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈ ಹಿನ್ನೆಲೆಯಲ್ಲಿ ಮುಜುಗರ ತಪ್ಪಿಸಲು ರಾಜೀನಾಮೆ ಪಡೆಯಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಗುರುವಾರ ರಾತ್ರಿ ನಡೆದ ಮಹತ್ವದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಈ ನಡುವೆ ಸರ್ಕಾರಕ್ಕೆ ಮುಖಭಂಗ ತಪ್ಪಿಸುವ ನಿಟ್ಟಿನಲ್ಲಿ, ಜೊತೆಗೆ ಮುಂದಿನ ತಿಂಗಳು ಮುಂಗಾರು ಅಧಿವೇಶನದಲ್ಲಿ ಈ ಬಗ್ಗೆ ಯಾವುದೇ ಕಾರಣಕ್ಕೆ ಇಕ್ಕಟ್ಟಿಗೆ ಸಿಲುಕದ ಹಾಗೇ ನೋಡಿಕೊಳ್ಳುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಗೃಹ ಸಚಿವಾಲಯದ ವರದಿ ಆಧರಿಸಿ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಇದಲ್ಲದೇ ತಾವೇ ಖುದ್ದು ಈ ಬಗ್ಗೆ ಹೇಳಿಕೆ ನೀಡುವಂತೆ ಸಿಎಂ ನಾಗೇಂದ್ರ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಶಿವಮೊಗ್ಗ ಅಧೀಕ್ಷಕ ಚಂದ್ರಶೇಖರ್ ಎನ್ನುವವರು ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಅವರು ಬರೆದಿದ್ದರು ಎನ್ನಲಾದ ಸುದೀರ್ಘ ಡೆತ್ ನೋಟ್ ಪತ್ತೆಯಾಗಿತ್ತು.
ವಾಲ್ಮೀಕಿ ನಿಗಮದಲ್ಲಿ 85 ಕೋಟಿ ರೂಪಾಯಿ ಅವ್ಯವಹಾರದಲ್ಲಿ ನಿಗಮದ ಎಂಡಿ ಜೆ.ಜಿ. ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣನವರ್, ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಶುಚಿಸ್ಮಿತಾ ರವುಲ್ ಎಂಬುವರ ಪಾತ್ರವಿದೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು.
ಇದೀಗ ಸಚಿವ ನಾಗೇಂದ್ರ ರಾಜೀನಾಮೆ ನೀಡಿದರೆ ಸರ್ಕಾರದ ಮೊದಲ ವಿಕೆಟ್ ಪತನವಾಗಲಿದೆ.