Share this news

ಬೆಂಗಳೂರು :  ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಸಚಿವರು ಹಾಗೂ ಪಕ್ಷದ ಶಾಸಕರೊಂದಿಗೆ ಸರಣಿ ಸಭೆ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ.ಇಂದಿನಿಂದ ನಾಲ್ಕು ದಿನಗಳ ಕಾಲ (ಜು.29ರಿಂದ ಆ.1ರವರೆಗೆ) ಖುದ್ದಾಗಿ ಜಿಲ್ಲಾವಾರು ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಭೆ ನಡೆಸಿ ಅಹವಾಲು ಆಲಿಸಲಿದ್ದಾರೆ. 

ಆಯಾ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದು, ಈ ವೇಳೆ ಕ್ಷೇತ್ರಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಬೇಡಿಕೆ ಸ್ವೀಕರಿಸಿ ಅನುದಾನ ಮಂಜೂರು ಮಾಡಲಿದ್ದಾರೆ. ಜತೆಗೆ ಸಚಿವರೊಂದಿಗಿನ ಸಮಸ್ಯೆಗಳು, ಸರ್ಕಾರ ಹಾಗೂ ಅಧಿಕಾರಿಗಳ ಹಂತದಲ್ಲಿರುವ ಸಮಸ್ಯೆಗಳ ಬಗ್ಗೆಯೂ ಅಹವಾಲು ಆಲಿಸಿ ಪರಿಹರಿಸಲು ಯತ್ನಿಸಲಿದ್ದಾರೆ. ತನ್ಮೂಲಕ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಪ್ರಯತ್ನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಮೊದಲಿಗೆ, ತವರು ಜಿಲ್ಲೆ ಮೈಸೂರಿನಿಂದಲೇ ಇಂದು ಸಂಜೆ ಸಭೆ ಆರಂಭಿಸಲಿದ್ದಾರೆ. ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಗಳು ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಆ ಸಂಬಂಧ ಸಚಿವರು, ಶಾಸಕರ ಜತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.ರಾಜಕೀಯವಾಗಿಯೂ ಈ ಸಭೆ ಬಹಳ ಮಹತ್ವದ್ದು ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ‘ಐದು ವರ್ಷ ನಾನೇ ಸಿಎಂ’ ಎಂದು ಸಿದ್ದರಾಮಯ್ಯ ಹೇಳಿದ್ದರು. ಅದಾದ ನಂತರ ರಾಜ್ಯ ಕಾಂಗ್ರೆಸ್​​​ನಲ್ಲಿ ಒಂದೇ ಶಕ್ತಿ ಕೇಂದ್ರ ಇದೆ ಎಂಬ ಸಂದೇಶ ನೀಡಲು ಅವರು ಈ ಸಭೆಯನ್ನು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿಗಳು ಉಸ್ತುವಾರಿ ಸಚಿವರು ಮತ್ತು ಶಾಸಕರ ಜತೆ ಸಭೆ ನಡೆಸುವ ವಿಚಾರವಾಗಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ  ಮಾಹಿತಿ ನೀಡಿದ್ದು, ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ. 2025-26ನೇ ಸಾಲಿನಲ್ಲಿ 8,000 ಕೋಟಿ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು 224 ವಿಧಾನಸಭಾ ಕ್ಷೇತ್ರಗಳಿಗೆ ವಿತರಿಸಲಾಗುವುದು. ಆಡಳಿತ ಪಕ್ಷದ ಶಾಸಕರಿಗೆ 50 ಕೋಟಿ ರೂಪಾಯಿ ಮತ್ತು ವಿರೋಧ ಪಕ್ಷದ ಶಾಸಕರಿಗೆ 25 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

 

 

Leave a Reply

Your email address will not be published. Required fields are marked *