Share this news
ಮಂಗಳೂರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಪ್ರಕರಣದಲ್ಲಿ ಈಗಾಗಲೇ ಮೂರು ನಾಲ್ಕು ಜನರ ಬಂಧನವಾಗಿದೆ. ಕಾನೂನು ಪ್ರಕಾರ ಆಗುವಾಗ ನಮ್ಮ ಹಸ್ತಕ್ಷೇಪವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಂದು ಮಂಗಳೂರಿನಲ್ಲಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಚೂರಿ ಇರಿದ ಪ್ರಕರಣದಲ್ಲಿ ಅಂಥವರು ಇಂಥವರು ಎಂಬುದೇನೂ ಇಲ್ಲ. ಯಾರೇ ತಪ್ಪು ಮಾಡಿದ್ರೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತದೆ. ಘಟನೆಗೆ ಕಾರಣ ಏನು ಇರಬಹುದು, ಕಾನೂನು ಕೈಗೆ ತೆಗೆದುಕೊಂಡಾಗ ಕ್ಷಮಿಸೋದಕ್ಕೆ ಆಗೋದಿಲ್ಲ. ಈ ಪ್ರಕರಣದಲ್ಲಿ ಕೆಲವರು ಪ್ರಚೋದನೆ ಮಾಡಿರಬಹುದು, ಆದರೆ ಸಂಯಮ ಕಾಪಾಡೋದು ನಮ್ಮ ಜವಾಬ್ದಾರಿಯೂ ಹೌದು. ಕಾನೂನು ಕೈಗೆತ್ತಿಕೊಂಡರೆ ಕ್ರಮ ಆಗಲೇಬೇಕು. ಇಂತಹ ಘಟನೆ ಆದಾಗ ಸರ್ಕಾರ, ರಾಜಕಾರಣಿಗಳು ತಟಸ್ಥರಾಗಬೇಕು ಎಂದರು.

ಇನ್ನು ದಕ್ಷಿಣ ಕನ್ನಡ ಅಭ್ಯರ್ಥಿ ಸೋಲಿನ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ವಿಧಾನ ಪರಿಷತ್‌ನಲ್ಲಿ ನಾವೇ ಗೆಲ್ತೀವಿ ಎಂದು ಹೇಳಿರಲಿಲ್ಲ. ಗೆಲುವು ಕಷ್ಟ ಎಂದು ನಮಗೆ ಮೊದಲೇ ಗೊತ್ತಿತ್ತು. ನಾವಿಲ್ಲಿ ನೂರಕ್ಕೆ ನೂರು ಗೆಲ್ತಿವಿ ಎಂದು ಹೇಳಿರಲಿಲ್ಲ. ಕರಾವಳಿ ಪ್ರದೇಶ, ಉಡುಪಿ ,ಉತ್ತರ ಕನ್ನಡಲ್ಲಿ ಪರಿಸ್ಥಿತಿಯ ಅರಿವಿದೆ. ನಮ್ಮ ಅಭ್ಯರ್ಥಿ ಪದ್ಮರಾಜ್ ಅವರು ಶ್ರಮ ಪಟ್ಟಿದ್ದಾರೆ. ಅದೇ ರೀತಿ ಲೋಕ ಸಭೆಯಲ್ಲಿ ನಮ್ಮ ಪಕ್ಷ ಸೋತರೂ ಈ ಬಾರಿ ಸೋಲಿನ ಅಂತರ ಕಡಿಮೆಯಾಗಿದೆ ಎಂದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ದೇಶದ ಜನರು ತಕ್ಕ ಪಾಠ ಕಲಿಸಿದ್ದಾರೆ. ಅವರು ಸರ್ವಾಧಿಕಾರಿ ರೀತಿ ಹೋಗುತ್ತೀವಿ  ಅಂದಿದ್ದಕ್ಕೆ ಕಡಿವಾಣ ಬಿದ್ದಿದೆ. ನಿಮ್ಮ ಸರ್ವಾಧಿಕಾರಿ ಧೋರಣೆ ಅನುಸರಿಸೋದಕ್ಕೆ ಆಗೋದಿಲ್ಲ.  ಪ್ರಜಾಪ್ರಭುತ್ವ ಉಳಿಸುವ ಫಲಿತಾಂಶ ದೇಶದ ಜನರು ಕೊಟ್ಟಿದ್ದಾರೆ. ನಮ್ಮ ಪ್ರಧಾನಿ ಅವರೇ ಭಗವಂತ ಎಂದು ಹೇಳಿದ್ರು. ಇದೀಗ ಚುನಾವಣೆ ಫಲಿತಾಂಶ ಬಳಿಕ ಸಾಮಾನ್ಯ ಮನುಷ್ಯರಾಗಿದ್ದಾರೆ. ಎಲ್ಲರಿಗೂ ತಗ್ಗಿ ಬಗ್ಗಿ ಹೋಗುವ ಪರಿಸ್ಥಿತಿ ಬಂದಿದೆ. 

ಎಲ್ಲ ಅಡೆತಡೆಗಳನ್ನ ಎದುರಿಸಿ ನೂರಕ್ಕೆ ಬಂದಿದ್ದೇವೆ. ಒಳ್ಳೆಯ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಸಚಿವರುಗಳ ಕ್ಷೇತ್ರದಲ್ಲೇ ಪಕ್ಷಕ್ಕೆ ಸೋಲಾಗಿದೆ. ಈ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ. ಪಕ್ಷದ ಹಿತದೃಷ್ಟಿಯಿಂದ ಏನೇನು ಮಾಡಬೇಕು ಅದನ್ನೆಲ್ಲ ವರಿಷ್ಠರು ಮಾಡಲಿದ್ದಾರೆ. ನಾವು ಕೂಡ ತಯಾರಾಗಿದ್ದದೇವೆ. ಪಕ್ಷಕ್ಕೆ ಎಲ್ಲರೂ ಮುಖ್ಯವೇ ಆದರೆ ಯಾರೂ ಅನಿವಾರ್ಯವಲ್ಲ. ದಕ್ಷಿಣ ಕನ್ನಡದಲ್ಲಿ ಬಿಜೆಪಿ ಗೆಲ್ಲೋದಕ್ಕೆ ಕೋಮುವಾದ ಕಾರಣ. ನಮ್ಮ ಅಭ್ಯರ್ಥಿ ಸೋತರೂ ಎಲ್ಲರನ್ನೂ ಸೇರಿಸಿಕೊಂಡು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇವೆ ಎಂದರು.

 

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *