ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ಅವ್ಯವಹಾರ ಪ್ರಕರಣದಲ್ಲಿ ಸಿಎಂ ಸಿದ್ಧರಾಮಯ್ಯ, ಮಾಜಿ ಸಚಿವ ಬಿ.ನಾಗೇಂದ್ರ ಭಾಗಿಯಾಗಿದ್ದಾರೆ ಎಂದು ಹೇಳುವಂತೆ ಇಡಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ ಎನ್ನುವ ಆರೋಪ ಮೇಲೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೇ ಇದೀಗ ED ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಜ್ಯಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ಶೇಷಾದ್ರಿಪುರಂ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ
ಈ ಕುರಿತು ಸೋಮವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹಿಂದಿನ ನಿರ್ದೇಶಕ ಕಲ್ಲೇಶ್ ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅದರಲ್ಲಿ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಇಡಿ ಅಧಿಕಾರಿಗಳು ಸಿಎಂ ಸಿದ್ಧರಾಮಯ್ಯ, ಮಾಜಿ ಸಚಿವ ಬಿ.ನಾಗೇಂದ್ರ ಹೆಸರೇಳುವಂತೆ ಒತ್ತಡ ಹಾಕುತ್ತಿದ್ದಾರೆ. ಮಾನಸಿಕ ಹಿಂಸೆ ನೀಡಿ, ಕಿರುಕುಳ ನೀಡುತ್ತಿದ್ದಾರೆ ಅಂತ ಹೇಳಿದ್ದಾರೆ.
ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿನ ಸಹಾಯ ನಿರ್ದೇಶಕರಾದ ಮುರಳಿ ಕಣ್ಣನ್ ಹಾಗೂ ಐಆರ್ ಎಸ್ ಅಧಿಕಾರಿ ಮಿತ್ತಲ್ ಎಂಬುವರು ನಿನಗೆ ಇಡಿ ಸಹಾಯ ಮಾಡಬೇಕೆಂದರೆ ನೀನು ಬರೆದು ಕೊಡಬೇಕು. ಎಂಜಿ ರೋಡ್ ಖಾತೆಗೆ ಹಣವನ್ನು ಸಿಎಂ,ಮಾಜಿ ಸಚಿವ ನಾಗೇಂದ್ರ ನಿರ್ದೇಶನದಂತೆ ಹಣವನ್ನು ಎಫ್.ಡಿ ಮಾಡಿರುತ್ತೇನೆ.ಇದಕ್ಕೆ ಅವರ ಒತ್ತಡ ಇತ್ತು ಎಂದು ಬರೆದು ಕೊಡಲು ತಿಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪದೇಪದೇ ಪ್ರಶ್ನೆ ಕೇಳಿ ನಿನಗೆ 7 ವರ್ಷ ಜೈಲು ಶಿಕ್ಷೆ ಮಾಡಿಸುವವರೆಗೂ ಬಿಡುವುದಿಲ್ಲ. ಇಡಿ ಬಗ್ಗೆ ನಿನಗೆ ಗೊತ್ತಿಲ್ಲ. 2-3 ವರ್ಷ ನಿನಗೆ ಬೇಲ್ ಸಿಗುವುದಿಲ್ಲ. ನೀನೊಬ್ಬ ಅಪರಾಧಿ. ನಿನ್ನ ಹೇಳಿಕೆಯನ್ನು ನಾನು ಓದಿದ್ದೇನೆ. ಇದು ಪ್ರಯೋಜನಕ್ಕೆ ಬರುವುದಿಲ್ಲ. ಸಿಎಂ, ಮಾಜಿ ಸಚಿವ ನಾಗೇಂದ್ರ ಹೆಸರು ಹೇಳುವಂತೆ ಇಡಿ ಕಚೇರಿಯಲ್ಲಿ ಒತ್ತಡ ಹಾಕಿ, ಮಾನಸಿಕ ಹಿಂಸೆ, ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹಿಂದಿನ ನಿರ್ದೇಶಕ ಕಲ್ಲೇಶ್ ದೂರಿನ ಹಿನ್ನಲೆಯಲ್ಲಿ ಇಬ್ಬರು ಇಡಿ ಅಧಿಕಾರಿಗಳ ವಿರುದ್ಧ ಶೇಷಾದ್ರಿಪುರಂ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ 2023ರ ಅಡಿಯಲ್ಲಿ ಯುಎಸ್ 3(5), 351)2) ಹಾಗೂ 352ರಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
