
ಕಾರ್ಕಳ,ಜ.20 : ಉಡುಪಿ ಪರ್ಯಾಯ ಮಹೋತ್ಸವದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ. ಟಿ.ಕೆ ಅವರು ಧಾರ್ಮಿಕ ಸಂಕೇತವಾದ ಕೇಸರಿ ಧ್ವಜವನ್ನು ಪ್ರದರ್ಶನ ಮಾಡಿದ್ದಾರೆ ಎನ್ನುವ ವಿಚಾರದಲ್ಲಿ ಅವರ ವಿರುದ್ಧ ಉಡುಪಿ ಕಾಂಗ್ರೆಸ್ ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದು, ಇದು ಕಾಂಗ್ರೆಸ್ ನಾಯಕರ ಕ್ಷುದ್ರ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಧಾರ್ಮಿಕ ಆಚರಣೆಯಾದ ಪರ್ಯಾಯ ಉತ್ಸವದಲ್ಲಿ ಕೇಸರಿ ಧ್ವಜ ಹಾರಿಸದೇ ಕಾಂಗ್ರೆಸ್ ಬಾವುಟ ಪ್ರದರ್ಶನ ಮಾಡಬೇಕಿತ್ತೇ ? ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಬಿಟ್ಟು ಕಾಂಗ್ರೆಸ್ ಅಥವಾ ಹಸಿರು ಧ್ವಜ ಪ್ರದರ್ಶಿಸುವುದು ಮಾತ್ರ ಧರ್ಮ ನಿರಪೇಕ್ಷತೆಯೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾನವ ಹಕ್ಕು ಹಾಗೂ ಕಾನೂನು ವಿಭಾಗದ ಅಧ್ಯಕ್ಷ ಹರೀಶ್ ಶೆಟ್ಟಿ ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದು ಡಿಸಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಉಡುಪಿ ಪರ್ಯಾಯ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳು ಮೊದಲಿನಿಂದಲೂ ಭಾಗವಹಿಸಿದ್ದನ್ನು ನಾವು ನೋಡಿದ್ದೇವೆ. ಆದರೆ ಈ ಬಾರಿ ಮಾತ್ರ ಕಾಂಗ್ರೆಸ್ ಕಣ್ಣಿಗೆ ಅದ್ಯಾವ ಲೋಪ ಕಂಡಿತು ? ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂ ಆಚರಣೆಗಳಲ್ಲಿ ತಪ್ಪು ಹುಡುಕುವುದೇ ಕಾಂಗ್ರೆಸ್ ಗೆ ಚಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೋಡುಕಟ್ಟೆಯಿಂದ ಕೃಷ್ಣ ಮಠದವರೆಗೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ಬಗ್ಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸ್ಪಷ್ಟನೆಯನ್ನೂ ನೀಡಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಉಡುಪಿ ಪರ್ಯಾಯದಲ್ಲಿ ಭಾಗವಹಿಸುವುದು ಹೇಗೆ ಧರ್ಮನಿರಪೇಕ್ಷತೆಯ ಸಿದ್ಧಾಂತಕ್ಕೆ ವಿರುದ್ಧವಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಸಂವಿಧಾನ ಹಾಗೂ ಸಂವಿಧಾನದ ಆಶಯಗಳನ್ನು ತಪ್ಪಾಗಿ ವ್ಯಾಖ್ಯಾನ ಮಾಡುವುದು ಕಾಂಗ್ರೆಸ್ ಗೆ ಚಟವಾಗಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆ ಎಂಬಂತೆ ರಾಜ್ಯ ನಾಯಕರು ಮಾಡಿದ ತಪ್ಪನ್ನೇ ಉಡುಪಿ ಜಿಲ್ಲಾ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಇದೇ ರೀತಿ ತಪ್ಪು ಹುಡುಕಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಧೈರ್ಯ ಕಾಂಗ್ರೆಸ್ ನಾಯಕರಿಗೆ ಇದೆಯೇ ? ಎಂದು ಪ್ರಶ್ನಿಸಿದ್ದಾರೆ.

.
.
.
.
