ಕಾರ್ಕಳ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಭಾಷಣದಲ್ಲಿ ಸುಳ್ಳುಗಳನ್ನೇ ಹೇಳಿಕೊಂಡು ಬಂದ ಕಾಂಗ್ರೆಸ್ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆ ಎಂದೆಲ್ಲಾ ಸುಳ್ಳು ಹೇಳಿದ ಕಾಂಗ್ರೆಸ್ ಪಕ್ಷವು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಶವಸಂಸ್ಕಾರಕ್ಕೂ 10 ಅಡಿ ಜಾಗ ಕೊಡದೇ ಅವಮಾನಿಸಿದ್ದು, ಕಾಂಗ್ರೆಸ್ ಗೆ ಅಂಬೇಡ್ಕರ್ ಅವರ ಕುರಿತು ಮಾತನಾಡುವ ನೈತಿಕತೆ ಇಲ್ಲವೆಂದು ನೂತನ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಜೂ.16 ರಂದು ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಬಿಜೆಪಿ ವತಿಯಿಂದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸಿ ಅವರ ಬದುಕನ್ನು ಪಂಚ ತೀರ್ಥ ಕ್ಷೇತ್ರಗಳನ್ನಾಗಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಅವರನ್ನು ಚುನಾವಣೆಗಾಗಿ ಬಳಸಿಕೊಂಡಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ರಾಜಧರ್ಮದಲ್ಲಿ ಚುನಾವಣೆಯನ್ನು ಎದುರಿಸುವ ಬದಲು ಬಿಜೆಪಿ ಹಾಗೂ ಪ್ರಧಾನಿ ಮೋದಿಯವರ ಬಗ್ಗೆ ಅಪಪ್ರಚಾರದಲ್ಲೇ ತೊಡಗಿಕೊಂಡ ಪರಿಣಾಮ ಕಾಂಗ್ರೆಸ್ ಗೆ ಸೋಲಾಗಿದೆ. ಮೋದಿ ಮೇಲಿನ ಅಚಲವಾದ ನಂಬಿಕೆ ವಿಶ್ವಾಸದಿಂದ ಕರಾವಳಿಯ ಜಿಲ್ಲೆಗಳಲ್ಲಿ ಜನ ಅಪಪ್ರಚಾರಕ್ಕೆ ಕಿವಿಗೊಡಲಿಲ್ಲ ಎಂದರು.
ಶಾಸಕ ಹಾಗೂ ಮಾಜಿ ಸಚಿವ ವಿ ಸುನಿಲ್ ಕುಮಾರ್ ಮಾತನಾಡಿ ದೇಶದಲ್ಲಿ 2004 ರಿಂದಲೂ ಬಿಜೆಪಿಯನ್ನು ಕಾರ್ಕಳ ಕ್ಷೇತ್ರದ ಮತದಾರ ಬಿಟ್ಟು ಕೊಟ್ಟಿಲ್ಲ.ಈ ಬಾರಿಯು ಕಾರ್ಕಳ ಕ್ಷೇತ್ರದಲ್ಲಿ 42 ಸಾವಿರ ಮತಗಳ ಅಂತರದ ಗೆಲುವು ಇದಕ್ಕೆ ಸಾಕ್ಷಿಯಾಗಿದೆ. ಲೋಕಸಭಾ ಚುನಾವಣೆ ಮುಗಿದಿದ್ದು ಈಗಾಗಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಉಂಟಾಗುತ್ತಿವೆ. ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಬಗ್ಗೆ ಮರಳುಮಾಡುತಿದ್ದರು. ಅಧಿಕಾರ ಬಂದ ಬಳಿಕ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ವಿಫಲವಾಗಿದೆ.ಗ್ಯಾರಂಟಿ ಯನ್ನು ನಿಲ್ಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷವಾದರೂ ಒಬ್ಬ ಕಾಂಗ್ರೆಸ್ ಶಾಸಕ ಕೂಡ ಈ ಬಾರಿ ಗುದ್ದಲಿ ಪೂಜೆ ಮಾಡಿಲ್ಲ. ಮುದ್ರಾಂಕ ಶುಲ್ಕ, ಹಾಸ್ಟೆಲ್ ಫೀ, ಹಾಲಿನ ಸಬ್ಸಿಡಿ ನಿಲ್ಲಿಸಿದ್ದಾರೆ. 2 ಸಾವಿರ ಕೊಟ್ಟು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿ ಕಾಂಗ್ರೆಸ್ ಪ್ರತಿಮನೆಯಿಂದ ತಿಂಗಳಿಗೆ 15 ಸಾವಿರಕ್ಕೂ ಹೆಚ್ಚು ಹಣವನ್ನು ಲೂಟಿ ಮಾಡುತ್ತಿದೆ. ಗ್ರಾಮ ಗ್ರಾಮಗಳಲ್ಲಿ ಬೆಲೆ ಏರಿಕೆ ವಿರುದ್ದ ಹೋರಾಟ ಆರಂಭವಾಗಲಿದೆ.ಕಾಂಗ್ರೆಸ್ ಸರಕಾರದಿಂದ ಕಾರ್ಕಳ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ 73 ಕೊಟಿ ರೂಪಾಯಿ ಅನುದಾನ ತಡೆಗಟ್ಟಿದೆ. ಮುಂದಿನ ದಿನಗಳಲ್ಲಿ ಜನರನ್ನು ಪಿಕ್ ಪಾಕೆಟ್ ಮಾಡುವ ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ,ನಮ್ಮ ಮುಂದಿನ ಗುರಿ ಜಿಪಂ ತಾ.ಪಂ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ನಮ್ಮ ಗುರಿಯಾಗಬೇಕೆಂದರು.
ವಿಧಾನ ಪರಿಷತ್ ಸದಸ್ಯ ಪ್ರಭಾಕರ್ ಸರ್ಜಿ ಮಾತನಾಡಿ ಕಾಂಗ್ರೆಸ್ ಪಕ್ಷದ ಬಿಟ್ಟಿ ಭಾಗ್ಯ ಪೊಳ್ಳು ಭರವಸೆಗಳ ನಡುವೆಯೂ ಬಿಜೆಪಿ ಪಕ್ಷಕ್ಕೆ ಗೆಲುವಾಗಿದೆ.ಕಾರ್ಯಕರ್ತರ ಶ್ರಮವೇ ಚುನಾವಣೆ ಗೆಲುವಿಗೆ ಯಶಸ್ಸಿಗೆ ಕಾರಣವಾಗಿದೆ ಎಂದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಕಿಶೋರ್ ಕುಮಾರ್ , ಮಾತನಾಡಿ ಲೋಕಸಭಾ ಚುನಾವಣೆ ಮುಂದಿನ ಎಲ್ಲಾ ಚುನಾವಣೆ ಗಳಲ್ಲಿ ಬಿಜೆಪಿ ಪಕ್ಷ ಗೆಲ್ಲಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಪ್ರಭಾಕರ್ ಕಾಮತ್, ಎಂಕೆ ವಿಜಯ ಕುಮಾರ್, ಕೆ.ಪಿ ಶೆಣೈ, ಮಣಿರಾಜ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್, ಜಯರಾಂಯ ಸಾಲ್ಯಾನ್ , ಉದಯ್ ಎಸ್ ಕೋಟ್ಯಾನ್,ಸುರೇಶ್ ಶೆಟ್ಟಿ ಶಿವಪುರ, ಬೋಳ ಸತೀಶ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ವಕ್ತಾರ ಸತೀಶ್ ಶೆಟ್ಟಿ ಮುಟ್ಲುಪಾಡಿ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.
ಅಗ್ನಿ ವೀರ್ ಗೆ ಆಯ್ಕೆಯಾದ ದುರ್ಗಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ ನಾಯಕ್ ಸ್ವಾಗತಿಸಿದರು. ಬಿಜೆಪಿ ಮಹಿಳಾ ಮೋರ್ಚಾದ ಜ್ಯೋತಿ ರಮೇಶ್ ಪ್ರಾರ್ಥಿಸಿದರು. ಕುಕ್ಕುಂದೂರು ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು











