Share this news

 

 

 

 

ಕಾರ್ಕಳ,ಡಿ.31: ಕಾರ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಸಾರ್ವಜನಿಕರಿಗಾಗಿ ಕಾರ್ಕಳ–ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರಥಮ ಬಾರಿಗೆ ‘ಹೊನಲು ಬೆಳಕಿನ ಅಥ್ಲೆಟಿಕ್ ಕ್ರೀಡಾಕೂಟ ಹಾಗೂ ಗುಂಪು ಪಂದ್ಯಾವಳಿಯನ್ನು ಜನವರಿ 25 ಮತ್ತು 26ರಂದು ಸಂಜೆ 4 ಗಂಟೆಯಿಂದ ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ.
ಅವರು ಕಾರ್ಕಳದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದ್ದು, ಹೈಸ್ಕೂಲ್, ಪದವಿ ಪೂರ್ವ, ಪದವಿ, 35 ವರ್ಷ ಮೇಲ್ಪಟ್ಟ ಹಾಗೂ 50 ವರ್ಷ ಮೇಲ್ಪಟ್ಟಂತೆ ಆರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದರು.
ಅಥ್ಲೆಟಿಕ್ ವಿಭಾಗದಲ್ಲಿ ವೈಯಕ್ತಿಕ 100 ಮೀ, 200 ಮೀ, 400 ಮೀ ಓಟ, ಉದ್ದ ಜಿಗಿತ ಹಾಗೂ ಗುಂಡು ಎಸೆತ ಸ್ಪರ್ಧೆಗಳು ನಡೆಯಲಿದ್ದು, ಭಾಗವಹಿಸುವ ಕ್ರೀಡಾಪಟುಗಳಿಗೆ ಗುರುತು ಚೀಟಿ ಕಡ್ಡಾಯವಾಗಿದೆ. ವಿಜೇತರಿಗೆ ನಗದು ಬಹುಮಾನ, ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುವುದು.
ಇದೇ ವೇಳೆ ಗುಂಪು ಸ್ಪರ್ಧೆಗಳಾಗಿ ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್, ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ ಹಾಗೂ ಖೋ–ಖೋ ಪಂದ್ಯಗಳು ನಡೆಯಲಿದ್ದು, ಜನವರಿ 18ರೊಳಗೆ ನೋಂದಣಿ ಕಡ್ಡಾಯವಾಗಿದೆ. ಎಲ್ಲಾ ವಿಭಾಗಗಳ ವಿಜೇತ ತಂಡಗಳಿಗೆ ಪ್ರಥಮ ರೂ.15,000, ದ್ವಿತೀಯ ರೂ.10,000, ತೃತೀಯ ರೂ.6,000, ಚತುರ್ಥ ರೂ.4,000 ನಗದು ಬಹುಮಾನಗಳೊಂದಿಗೆ ಆಕರ್ಷಕ ಶಾಶ್ವತ ಫಲಕ ನೀಡಲಾಗುತ್ತದೆ.
ಜನವರಿ 25ರಂದು ಸಂಜೆ 4 ಗಂಟೆಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಮೊದಲು ಗ್ರಾಮೀಣ ತಂಡಗಳಿಂದ ಪಥಸಂಚಲನ ನಡೆಯಲಿದ್ದು, ಆಕರ್ಷಕ ತಂಡಗಳಿಗೆ ಪ್ರಥಮ ರೂ.15,000, ದ್ವಿತೀಯ ರೂ.10,000 ಹಾಗೂ ತೃತೀಯ ರೂ.5,000 ನಗದು ಬಹುಮಾನ ಮತ್ತು ಶಾಶ್ವತ ಫಲಕ ನೀಡಿ ಪುರಸ್ಕರಿಸಲಾಗುತ್ತದೆ. ಪಥಸಂಚಲನದ ಗೌರವ ರಕ್ಷೆಯನ್ನು ರಾಜ್ಯ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವೀಕರಿಸಲಿದ್ದಾರೆ.
ಕ್ರೀಡಾಕೂಟವನ್ನು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಚಿವರಾದ ಪ್ರಿಯಾಂಕ್ ಖರ್ಗೆ,ಸಂತೋಷ್ ಲಾಡ್ ಮತ್ತು ಕೃಷ್ಣ ಬೈರೇಗೌಡ, ಶಾಸಕರು ಮಂಜುನಾಥ್ ಭಂಡಾರಿ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಹಾಗೂ ಉಡುಪಿ ಉಸ್ತುವಾರಿ ಐವನ್ ಡಿಸೋಜಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕ್ರೀಡಾ ಸಾಧಕರಿಗೆ ಸನ್ಮಾನ ನಡೆಯಲಿದೆ.
ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮ ವೀಕ್ಷಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ನಿಟ್ಟೆ, ಮಲ್ಲಿಕ್ ಅತ್ತೂರು, ಮಾಜಿ ಪುರಸಭಾ ಅಧ್ಯಕ್ಷ ಸುಭಿತ್ ಎನ್.ಆರ್. ಹಾಗೂ ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿವೇಕ್ ಶೆಣೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

    

   

             

     

             

           
   

 

   

             

     

             

       
   

  .      

   

             

     

             

           
   

 

   

             

     

             

       
   

                

   

             

     

             

           
   

 

   

             

     

             

       
   

 

Leave a Reply

Your email address will not be published. Required fields are marked *