ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣದಲ್ಲಿ ಸಿಲುಕಿದ್ದರೂ ದೊಡ್ಡ ಮಟ್ಟದ ಹೋರಾಟ ನಡೆಸದೇ ಬರೀ ಹೇಳಿಕೆ ನೀಡಿ ನಾಮಕಾವಸ್ಥೆ ಹೋರಾಟ ನಡೆಸುತ್ತಿರುವ ರಾಜ್ಯ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ಕೆಂಡಾಮಂಡಲವಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ, ಪರ್ಸೆಂಟೇಜ್ ಹಗರಣ ಎಂದು ವಿರೋಧಪಕ್ಷ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ದೊಡ್ಡ ಸುದ್ದಿಯನ್ನೇ ಮಾಡಿತ್ತು. ಅದೇ ಕಾಂಗ್ರೆಸ್ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದು ವರ್ಷ ಕಳೆಯುವುದರೊಳಗೆ ಎರಡು ದೊಡ್ಡ ಹಗರಣಗಳಲ್ಲಿ ಸಿಲುಕಿಕೊಂಡಿದೆ. ಮೊದಲನೇಯದು ಮಹರ್ಷಿ ವಾಲ್ಮೀಕಿ ನಿಗಮದಲ್ಲಿನ 187 ಕೋಟಿ ರೂ. ಹಣ ಅಕ್ರಮ ವರ್ಗಾವಣೆ, ಮತ್ತು ಮುಡಾ ನಿವೇಶನ ಹಂಚಿಕೆ ಹಗರಣ. ಈ ಹಗರಣದಲ್ಲಿ ಸುಮಾರು 5 ಸಾವಿರ ಕೋಟಿ ರೂ.ನಷ್ಟು ದೊಡ್ಡ ಹಗರಣ ನಡೆದಿದೆ. ಇಂತಹ ದೊಡ್ಡ ಹಗರಣಗಳು ನಡೆದಿದ್ದರೂ ಪರಿಣಾಮಕಾರಿಯಾಗಿ ಹೋರಾಟ ನಡೆಸದೇ ನಾಮಕಾವಸ್ತೆಗೆ ಹೋರಾಟ ನಡೆಸಿರುವ ರಾಜ್ಯ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ಗರಂ ಆಗಿದೆ.
ಕಳೆದ ಬಿಜೆಪಿ ಅಧಿಕಾರಾವಧಿಯಲ್ಲಿ ಪೇಸಿಎಂ, ಪರ್ಸೆಂಟೇಜ್ ಆರೋಪದಲ್ಲಿ ಕಾಂಗ್ರೆಸ್ ನಾಯಕರು ಬೀದಿಗಿಳಿದು ಭಾರೀ ಹೋರಾಟ ನಡೆಸಿದ್ದರು. ಬೀದಿಬೀದಿಗಳಲ್ಲಿ ಪೇಸಿಎಂ ಪೋಸ್ಟರ್ ಅಂಟಿಸುವ ಮೂಲಕ ಜಾಹೀರಾತು ಕೊಡುವ ಮೂಲಕ, ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾಗಿ ಹೋರಾಟ ನಡೆಸಿದ್ದರು. ಅವರು ಅಂದು ಮಾಡಿದ್ದ ಹೋರಾಟದಿಂದ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂತಾಗಿದ್ದು, ಆದರೀಗ ಅದೇ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ, ಹಗರಣದಲ್ಲಿ ಸಿಲುಕಿಕೊಂಡಿದೆ ಆದರೆ ಸಮರ್ಥವಾಗಿ ಹೋರಾಟ ರೂಪಿಸಬೇಕಾದ ರಾಜ್ಯ ಬಿಜೆಪಿ ನಾಯಕರು ಕೇವಲ ಹೇಳಿಕೆಗಳನ್ನಷ್ಟೇ ನೀಡುತ್ತಿದ್ದೀರಿ. ಯಾವ ನಾಯಕರಲ್ಲೂ ಹೋರಾಟ ನಡೆಸುವ ಕೆಚ್ಚು, ಹುಮ್ಮಸ್ಸು ಕಾಣುತ್ತಿಲ್ಲ ಎಂದು ರಾಜ್ಯ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
