ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಅಕ್ರಮ ನಿವೇಶನ ಹಂಚಿಕೆ ಹಗರಣ ರಾಜ್ಯದಲ್ಲಿ ತೀವ್ರ ಜಟಾಪಟಿಗೆ ಕಾರಣವಾಗಿದೆ. ಅಲ್ಲದೇ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸಿವೆ. ಈ ಮಧ್ಯೆ ಮುಡಾ ನಿವೇಶನ ಪಡೆದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಟ್ಟಿಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಬಿಡುಗಡೆ ಮಾಡುವ ಮೂಲಕ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಸುರೇಶ್, ಸಿದ್ದರಾಮಯ್ಯನವರ ಕುಟುಂಬಕ್ಕೆ ನಿವೇಶನ ದೊರೆತಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರೂ ಮುಡಾದಿಂದ ನಿವೇಶನ ಪಡೆದಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮುಡಾದಿಂದ ೨೧ ಸಾವಿರ ಚದರ ಅಡಿ ಜಾಗ ಮಂಜೂರಾಗಿದ್ದು, ಬಿಜೆಪಿ ಮುಖಂಡರಾದ ಎಚ್.ವಿಶ್ವನಾಥ್ ಮತ್ತಿತರರಿಗೂ ನಿವೇಶನ ಹಂಚಿಕೆ ಮಾಡಲಾಗಿದೆ ಎಂದರು.
ಜೆಡಿಎಸ್ ಶಾಸಕ ಜಿಟಿ ದೇವೇಗೌಡರಿಗೆ ಎರಡು ಕಡೆ ಜಮೀನು ಮಂಜೂರು ಮಾಡಲಾಗಿದೆ ಎಂದು ಸಚಿವ ಸುರೇಶ್ ಹೇಳಿದ್ದಾರೆ. ವಿರೋಧ ಪಕ್ಷಗಳಿಗೆ ಲಗತ್ತಿಸಿರುವ ಇತರ ರಾಜಕೀಯ ನಾಯಕರಿಗೆ ಮುಡಾ ನೀಡಿರುವ ನಿವೇಶನಗಳ ಪಟ್ಟಿಯನ್ನೂ ಅವರು ಬಿಡುಗಡೆ ಮಾಡಿದ್ದಾರೆ.
ಮುಡಾದಿಂದ ನಿವೇಶನಗಳನ್ನು ಪಡೆದಿರುವ ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಹೆಸರನ್ನು ಸದನದಲ್ಲಿ ಬಹಿರಂಗಪಡಿಸಲು ಅವಕಾಶ ನೀಡುವಂತೆ ಸ್ಪೀಕರ್ ಯುಟಿ ಖಾದರ್ ಅವರನ್ನು ಒತ್ತಾಯಿಸಿದ್ದೆ. ಆದರೆ, ಸ್ಪೀಕರ್ ಇದಕ್ಕೆ ಅನುಮತಿ ನಿರಾಕರಿಸಿದ್ದರು ಎಂದು ಹೇಳಿದರು.


`