ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲಿ ಪಕ್ಷಾಂತರ ಪರ್ವ ಮುಂದುವರಿದ್ದಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಖಂಡ ಶ್ರೀನಿವಾಸಮೂರ್ತಿ ಬುಧವಾರ ಕಾಂಗ್ರೆಸ್ ತೊರೆದು ತನ್ನ ಅಪಾರ ಬೆಂಬಲಿಗರ ಜತೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಖಂಡ ಶ್ರೀನಿವಾಸಮೂರ್ತಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ರಾಜ್ಯಸಭೆ ಸದಸ್ಯ ಲೆಹರ್ ಸಿಂಗ್, ಶಾಸಕ ಸುನೀಲ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಅಖಂಡ ಅವರನ್ನ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಬಿಎಸ್ ಯಡಿಯೂರಪ್ಪ, ಇಂದು ನಮ್ಮ ಮಾಜಿ ಶಾಸಕರಾದ ಅಖಂಡ ಶ್ರೀನಿವಾಸ್ ಮೂರ್ತಿ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದು ಪಕ್ಷಕ್ಕೆ ಹೆಚ್ಚು ಶಕ್ತಿ ನೀಡಲಿದೆ. ಶೋಭಾ ಕರಂದ್ಲಾಜೆ ಅವರು ಎರಡೂವರೆ ಲಕ್ಷ ಅಂತರದಿAದ ಗೆಲ್ಲೋದು ನಿಶ್ಚಿತ. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಸಂಧರ್ಭದಲ್ಲಿ ದಲಿತ ಮುಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆ ಸುಟ್ಟು ಹಾಕಿದ್ದರು. ಆಗ ಕಾಂಗ್ರೆಸ್ ಇವರಿಗೆ ಬೆಂಬಲ ನೀಡಲಿಲ್ಲ. ನಾವು ಆಗ ಇವರ ಬೆಂಬಲಕ್ಕೆ ನಿಂತೆವು, ಅವರ ಆಗಮನ ಆನೆ ಬಲ ಬಂದAತಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಅಖಂಡ ಬಹಳ ಹಿಂದೆಯೇ ಬಿಜೆಪಿ ಸೇರಬೇಕಿತ್ತು, ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ವೇಳೆ ಅವರ ಮನೆ ಸುಡಲಾಗಿತ್ತು. ಆಗ ಅವರ ಜೊತೆ ಇಡೀ ಕಾಂಗ್ರೆಸ್ ನಿಲ್ಲಬೇಕಿತ್ತು ಆದರೆ ನಿಲ್ಲಲಿಲ್ಲ. ಯಾವ ನಾಯಕರೂ ಅಲ್ಲಿಗೆ ಹೋಗುವ ಧೈರ್ಯ ಮಾಡಲಿಲ್ಲ, ಪೊಲೀಸ್ ಠಾಣೆ ಉರಿಯುತ್ತಿತ್ತು, ವಾಹನಗಳು ಉರಿಯುತ್ತಿದ್ದವು. ಇಡೀ ಮನೆ ಸುಟ್ಟು ಕರಕಲಾಗಿತ್ತು, ಅಂತಹ ಸ್ಥಿತಿಯಲ್ಲಿ ಅಖಂಡ ಅವರನ್ನು ಕಂಡಿದ್ದೆ. ನಮ್ಮ ನಾಯಕರು, ಯುವಕರ ಮನೆ ಸುಡಲಾಗಿತ್ತು. ನಮ್ಮ ಯುವಕರು ಬಹಳ ಧೈರ್ಯದಿಂದ ಅಂದು ನನ್ನ ಜೊತೆ ಅಲ್ಲಿಗೆ ಭೇಟಿ ನೀಡಿದ್ದರು. ಪುಲಿಕೇಶಿ ನಗರದಲ್ಲಿ ಬಹುಸಂಖ್ಯಾತರು ಅಲ್ಪಸಂಖ್ಯಾರಾಗಿದ್ದಾರೆ ಆದರೆ ಅವರು ಅಲ್ಲಿಯೇ ಬದುಕಬೇಕಿದೆ, ಅಲ್ಲಿ ರೋಡ್ ಶೋ ನಡೆಸಿದಾಗ ಜೀವದ ಹಂಗು ತೊರೆದು ಭಾಗವಹಿಸಿದ್ದು ಖುಷಿಯಾಯಿತು.
ಅಖಂಡ ಶ್ರೀನಿವಾಸ್ ಮೂರ್ತಿ ಮಾತನಾಡಿ, ಶ್ರೀರಾಮ ನವಮಿಯಂದು ಪಕ್ಷ ಸೇರ್ಪಡೆಯಾಗಲು ಅವಕಾಶ ನೀಡಿದ್ದಾರೆ. ನಾನು ಬಿಜೆಪಿ ಸೇರಲು ಕಾರಣ ಶ್ರೀರಾಮನ ಆಶೀರ್ವಾದ. ಯಡಿಯೂರಪ್ಪನವರ ಆಶೀರ್ವಾದ ಕಾರಣ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲು ನಾನು ಸಿದ್ಧ. 2018ರಲ್ಲಿ ಅತಿ ಹೆಚ್ಚು ವೋಟು ಪಡೆದು ಗೆದ್ದವನು ನಾನು, ನನಗೆ ಟಿಕೆಟ್ ತಪ್ಪಿಸಿದ್ದು ಕಾಂಗ್ರೆಸ್. ನನ್ನದಲ್ಲದ ತಪ್ಪಿಗೆ ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಭೆಯಲ್ಲಿ ನನ್ನ ಮನೆ ಸುಟ್ಟು ಹಾಕಿದ್ದರು. ಆ ಸಂದರ್ಭದಲ್ಲಿ ಯಾರೂ ನನ್ನ ಬೆಂಬಲಕ್ಕೆ ಬಂದಿರಲಿಲ್ಲ ಎಂದರು.
ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿರುವ ಅಖಂಡ ಅವರು ಕಳೆದ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದರು. ಆ ಬಳಿಕ ಬಿಎಸ್ಪಿ ಪಕ್ಷದಿಂದ ಟಿಕೆಟ್ ಪಡೆದು ಪುಲಿಕೇಶಿನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲುಂಡಿದ್ದರು. ಅಖಂಡ ಶ್ರೀನಿವಾಸಮೂರ್ತಿ ಅವರ ಸೇರ್ಪಡೆಯಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ವರದಾನವಾಗಬಹುದು ಎನ್ನಲಾಗಿದೆ