ಬೆಂಗಳೂರು: ಇಡೀ ಜಗತ್ತನ್ನೇ ಕಾಡಿದ್ದ ಮಹಾಮಾರಿ ಕೊರೊನಾ ವೈರಸ್ ಈಗ ಮತ್ತೆ ಆತಂಕ ಹುಟ್ಟಿಸುತ್ತಿದೆ. ಹಲವು ದೇಶಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದಕ್ಕೆ ಕೊರೊನಾ ರೂಪಾಂತರ ತಳಿ ಕಾರಣ ಎನ್ನಲಾಗಿದೆ. ಆದರೆ, ಕರ್ನಾಟಕದಲ್ಲೂ ಈಗ ಕೊರೊನಾ ಸೋಂಕು ನಿಧಾನಕ್ಕೆ ಏರುಗತಿಯಲ್ಲಿ ಸಾಗುತ್ತಿರುವುದು ಆತಂಕ ಹುಟ್ಟಿಸಿದೆ.
ಸಿಂಗಾಪುರ, ಹಾಂಕಾಂಗ್‌ನಲ್ಲಿ ತಲ್ಲಣ ಎಬ್ಬಿಸಿರುವ ಕೊರೊನಾ ಹೊಸ ತಳಿ ಈಗ ಕರ್ನಾಟಕದಲ್ಲಿ ನಿಧಾನಕೆ ಏರುಗತಿಯಲ್ಲಿ ಸಾಗುತ್ತಿದೆ. ಮೇ ತಿಂಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಜನವರಿಯಲ್ಲಿ ಮೂರು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಫೆಬ್ರವರಿಯಲ್ಲಿ ಕೇವಲ 1 ಕೇಸ್ ಪತ್ತೆಯಾಗಿತ್ತು. ಮಾರ್ಚ್‌ನಲ್ಲೂ ಮೂರು, ಏಪ್ರಿಲ್ ತಿಂಗಳಲ್ಲೂ ಕೇವಲ 3 ಕೇಸ್‌ಗಳು ದಾಖಲಾಗಿದ್ದವು. ಆದರೆ, ಮೇ ತಿಂಗಳಲ್ಲಿ ಇದುವರೆಗೆ 33 ಪ್ರಕರಣಗಳು ಪತ್ತೆಯಾಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ 9 ತಿಂಗಳ ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವನ್ನು ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸದ್ಯ 16 ಸಕ್ರಿಯ ಪ್ರಕರಣಗಳಿವೆ.
ಭಾರತದಲ್ಲಿ ಸದ್ಯ ಸಕ್ರಿಯ ಕೊವಿಡ್ ಕೇಸ್‌ಗಳ ಸಂಖ್ಯೆ 257 ಇದೆ. ಈ ಪೈಕಿ ಬಹುತೇಕ ಸೋಂಕಿತರು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಹೀಗಾಗಿ ಆತಂಕ ಬೇಡ, ಎಚ್ಚರವಿರಲಿ.