ಬೆಂಗಳೂರು: ರಾಜ್ಯಕ್ಕೆ ಕೊರೊನಾ ವೈರಸ್ ಮತ್ತೆ ಒಕ್ಕರಿಸಿದೆ. ರಾಜ್ಯದಲ್ಲಿ ಶನಿವಾರ (ಮೇ.24) ಐವರಿಗೆ ಕೊರೊನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ 85 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಲ್ಲಿ 32 ಬೆಂಗಳೂರಿನಲ್ಲಿ ದೃಢಪಟ್ಟಿವೆ. ಶನಿವಾರ (ಮೇ.24) ವಿಜಯನಗರ ಜಿಲ್ಲೆಯಲ್ಲಿ ಒಬ್ಬರು, ಮೈಸೂರಿನಲ್ಲಿ ಇಬ್ಬರಿಗೆ ಮತ್ತು ಬೆಂಗಳೂರಿನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಳಗಾವಿ ಜಿಲ್ಲೆಗೂ ಕೊರೊನಾ ವೈರಸ್ ಕಾಲಿಟ್ಟದೆ. ಬೆಳಗಾವಿ ನಗರದ ಓರ್ವ ಗರ್ಭಿಣಿಯಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ. ಗರ್ಭಿಣಿ ನ್ಯುಮೋನಿಯಾದಿಂದ ಬಳಲುತ್ತಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೆಳಗಾವಿ ಡಿಹೆಚ್ಒ ಡಾ.ಈಶ್ವರ ಗಡಾದಿ ಮಾಹಿತಿ ನೀಡಿದರು. ಗರ್ಭಿಣಿ ತಿಂಗಳ ಹಿಂದೆ ಮಹಾರಾಷ್ಟ್ರದ ಪುಣೆಗೆ ಹೋಗಿ ಬಂದಿದ್ದರು ಎಂದು ತಿಳಿದುಬಂದಿದೆ.
ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಕೆಲ ಸಲಹೆಗಳನ್ನು ನೀಡಿದ್ದಾರೆ. ಸಲಹಾ ಸಮಿತಿ ಸೂಚನೆ ಮೇರೆಗೆ ರವಿವಾರ (ಮೇ.25) ದಿಂದ ರಾಜ್ಯದ 8 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಮತ್ತೆ ಆರಂಭಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.