ಧರ್ಮಸ್ಥಳ: ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಿಢೀರ್ ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಬಂದು ಮಂಜುನಾಥನ ದರ್ಶನ ಪಡೆದಿದ್ದಾರೆ. ದೇವರ ದರ್ಶನ ಪಡೆದ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ನಾನು ಪ್ರತೀ ಸಲವೂ ಧರ್ಮ ಯುದ್ಧದ ಸಂದರ್ಭದಲ್ಲಿ ಮಂಜುನಾಥನ ದರ್ಶನ ಪಡೆಯುವುದು ರೂಢಿಯಾಗಿದೆ. ನಾನು ನಂಬಿದ ಮಂಜುನಾಥ, ಗಂಗಾಧರ ಅಜ್ಜ ನನ್ನ ಬದುಕಿನಲ್ಲಿ ಇಲ್ಲಿಯವರೆಗೆ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಚುನಾವಣಾ ತಯಾರಿಯ ಕುರಿತು ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳ ಹಾಗೂ ಮಂಜುನಾಥನ ಶಕ್ತಿಯನ್ನು ಮಾತು ಬಿಡದ ಮಂಜುನಾಥ ಎನ್ನುವಂತೆ, ನಾವು ಕೂಡ ಚುನಾವಣೆಗೂ ಮುನ್ನ ಕೊಟ್ಟ ಮಾತನ್ನು ತಪ್ಪದೇ ಪಾಲಿಸಿದ್ದೇವೆ. ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದಿದ್ದೇವೆ,ಇದರಿಂದ ನಮಗೆ ಮತ್ತಷ್ಟು ಬಲ ಬಂದಿದೆ ಎಂದರು.
ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ ತೃಪ್ತಿ ನಮಗಿದೆ, ಈ ಯೋಜನೆಗಳ ಲಾಭ ಪಡೆದ ಫಲಾನುಭವಿಗಳು ಪುಣ್ಯ ಸ್ಥಳಗಳಿಗೆ ತೀರ್ಥಯಾತ್ರೆ ಮಾಡುತ್ತಿದ್ದಾರೆ. ಜನರು ಉಪಕಾರ ಸ್ಮರಣೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು