
ಕಾರ್ಕಳ, ನ. 10: ಅಧಿಕಾರಿಗಳು ತಮ್ಮ ಇಲಾಖೆಗಳ ನಡುವೆ ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಕಾರ್ಕಳದ ಸಮಗ್ರ ಅಭಿವೃದ್ಧಿ ಸಾಧ್ಯ. ಅಧಿಕಾರಿಗಳು ಕಚೇರಿ ಬಿಟ್ಟು ಜನರ ಬಳಿಗೆ ಹೋಗಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಯತ್ನ ಮಾಡಬೇಕು ಎಂದು ಶಾಸಕ ಸುನಿಲ್ ಕುಮಾರ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅವರು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿ,ಇಂದಿನ ಸಭೆಗೆ ಕೆಲವು ಅಧಿಕಾರಿಗಳು ತಡವಾಗಿ ಹಾಜರಾಗಿದ್ದೀರಿ.ಇಂತಹ ವರ್ತನೆ ಸರಿಯಲ್ಲ. ಅಧಿಕಾರಿಗಳು ಸರ್ಕಾರ ಹಾಗೂ ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡಬೇಕು. ತಮ್ಮ ಇಲಾಖೆಗಳ ಕುರಿತು ಸಮರ್ಪಕ ಮಾಹಿತಿ ಹಾಗೂ ಅಂಕಿಅಂಶಗಳು ಇಲ್ಲದೇ ಸಭೆಯಲ್ಲಿ ಸಬೂಬು ಹೇಳುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯಲ್ಲಿ ಒಟ್ಟು 385 ಕೊಳವೆ ಬಾವಿಗಳಿಂದ ಕಾರ್ಕಳ ತಾಲೂಕಿನ 26199 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಇದಕ್ಕಾಗಿ 85 ಓವರ್ ಹೆಡ್ ಟ್ಯಾಂಕ್ ಗಳನ್ನು ನಿರ್ಮಿಸಲಾಗಿದೆ ಎಂದರು. ಮಿಯ್ಯಾರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಪ್ರಗತಿಯಾಗದ ಕುರಿತು ಶಾಸಕ ಸುನಿಲ್ ಕುಮಾರ್ ಪ್ರಶ್ನಿಸಿದ್ದು, ಮಿಯ್ಯಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮಸ್ಯೆಯಿಂದ ಕೆಲವೆಡೆ ನಳ್ಳಿ ನೀರಿನ ಸಂಪರ್ಕ ಸಾಧ್ಯವಾಗಿಲ್ಲ ಎಂದರು.
ಜೆಜೆಎಂ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳು ವಿಫಲರಾಗಿದ್ದೀರಿ,ಈ ಯೋಜನೆ ಕುರಿತು ಸರಿಯಾದ ಮಾಹಿತಿ ಇಲ್ಲದೇ ಪಿಕ್ನಿಕ್ ಗೆ ಬಂದ ಹಾಗೆ ಸಭೆಗೆ ಬಂದಿದ್ದೀರಿ.ಸೂಕ್ತ ಮಾಹಿತಿ ಅಥವಾ ದತ್ತಾಂಶಗಳು ಇಲ್ಲದೇ ಸಭೆಗೆ ಹಾಜರಾಗಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಡಾ.ಚಂದ್ರಶೇಖರ ಸಾಲಿಮಠ ಅವರು ಇಲಾಖೆಯ ಪ್ರಗತಿ ಕುರಿತು ಮಾಹಿತಿ ನೀಡಿದರು.
ಈಗಾಗಲೇ 300 ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಲಾಗಿದೆ.ಜೊತೆಗೆ 14 ಸಾವಿರ ರೇಬಿಸ್ ಲಸಿಕೆ ಹಾಕಲಾಗಿದ್ದು, ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಏಜೆನ್ಸಿಗಳ ಮೂಲಕ ಬೀದಿನಾಯಿಗಳ ಸಂತಾನ ಹರಣಕ್ಕೆ ಕ್ರಮ ವಹಿಸಲಾಗುವುದು ಎಂದರು.
ಆಹಾರ ನಿರೀಕ್ಷಕಿ ಸುಮತಿ ನಾಯಕ್ ಅವರು,
ಬಿಪಿಎಲ್ ಪಡಿತರ ಚೀಟಿಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.ಆದರೆ ವೈದ್ಯಕೀಯ ಕಾರಣಕ್ಕಾಗಿ ಬಿಪಿಎಲ್ ಕಾರ್ಡ್ ಕೊಡಲು ಅವಕಾಶವಿದೆ ಎಂದರು. ಇನ್ನುಳಿದಂತೆ
3925 ಕಾಡ್ ಗಳನ್ನು ಬಿಪಿಎಲ್ ನಿಂದ ರದ್ದುಪಡಿಸಲು ಪರಿಶೀಲನೆಗೆ ಬಂದಿದೆ .ಈ ಪೈಕಿ 2394 ವೆರಿಫಿಕೇಶನ್ ಆಗಿದ್ದು114 ಕಾರ್ಡುಗಳನ್ನು ಎಪಿಎಲ್ ಗೆ ಬದಲಾಯಿಸಲಾಗಿದೆ ಎಂದರು.
ಉಳಿದ ಕಾರ್ಡುಗಳನ್ನು APL ಗೆ ಬದಲಾಯಿಸದೇ ಅದಕ್ಕೆ ಮಾರ್ಗೋಪಾಯ ಕಂಡುಹಿಡಿದು ಬಡವರಿಗೆ ನ್ಯಾಯ ಒದಗಿಸಬೇಕು ಎಂದು ಶಾಸಕ ಸುನಿಲ್ ಕುಮಾರ್ ಸೂಚಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗಳು ಕಡಿಮೆಯಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಶಾಸಕರು,ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಕೊಟ್ಟರೆ ಜನ ಬರುತ್ತಾರೆ ಈ ನಿಟ್ಟಿನಲ್ಲಿ ಸಿಬ್ಬಂದಿಗಳು ಜನರ ಉತ್ತಮ ಸೇವೆ ನೀಡಬೇಕು, ಮಾತ್ರವಲ್ಲದೇ ಹೆರಿಗೆ ಸಂಖ್ಯೆಯನ್ನು 100 ಕ್ಕೆ ಏರಿಸಬೇಕು ಎಂದರು.ಇದಲ್ಲದೇ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮಕ್ಕೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಆದ್ದರಿಂದ ಆದ್ದರಿಂದ ಹಾಲಿ ಸಿಬ್ಬಂದಿಗಳನ್ನು ಉಳಿಸಿಕೊಳ್ಳುವಂತೆ ವೈದ್ಯಾದಿಕಾರಿಗೆ ಸೂಚಿಸಿದರು.
ಆಶಾ ಕಾರ್ಯಕರ್ತೆಯರಿಗೆ ಕಳೆದ 4 ತಿಂಗಳಿನಿಂದ ವೇತನ ಪಾವತಿಯಾಗದ ಹಾಗೂ ಸಮೀಕ್ಷೆಯ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ 6 ಜನ ಆಶಾ ಕಾರ್ಯಕರ್ತೆಯರು ರಾಜೀನಾಮೆ ನೀಡಿದ್ದಾರೆ. ಈ ಪೈಕಿ 2 ತಿಂಗಳ ವೇತನ ಪಾವತಿ ಆಗಿದೆ. ರಾಜೀನಾಮೆ ನೀಡಿದ ಆಶಾ ಕಾರ್ಯಕರ್ತೆಯರ ಮನವೊಲಿಸಲು ಪ್ರಯತ್ನಿಸಲಾಗುವುದು ಎಂದು ವೈದ್ಯಾಧಿಕಾರಿ ಸ್ಪಷ್ಟಪಡಿಸಿದರು.
94 ಸಿ, ಸಿಸಿ ಹಾಗೂ ಅಕ್ರಮ ಸಕ್ರಮ ಅರ್ಜಿಗಳ ಕುರಿತು ಮಾಹಿತಿ ಪಡೆದ ಶಾಸಕರು, ಅರ್ಜಿದಾರರ ಅರ್ಜಿಗಳನ್ನು ಕೃತಾವಳಿ ಇಲ್ಲ ಎನ್ನುವ ಸಬೂಬು ನೀಡಿ ಏಕಾಎಕಿ ತಿರಸ್ಕರಿಸದೇ ಅದನ್ನು ಎಸಿ ಗೆ ರವಾನಿಸಿ ಎಸಿ ವಿಚಾರಣೆ ನಡೆಸಬೇಕು.ಯಾವುದೇ ಕಾರಣಕ್ಕೂ ನನ್ನ ಗಮನಕ್ಕೆ ತರದೇ ಅರ್ಜಿಗಳನ್ನು ರದ್ದುಪಡಿಸುವಂತಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯ ಹಕ್ಕು ಕಾಯಿದೆ ವಿಚಾರದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳ ಜಂಟೀ ಸರ್ವೆಯಲ್ಲಿ ಅರಣ್ಯದ ಅಂಚಿನಲ್ಲಿ ವಾಸಿಸುವ ಗುಂಪು ಮನೆಗಳನ್ನು ಅರಣ್ಯ ವ್ಯಾಪ್ತಿಯಿಂದ ಕೈಬಿಡಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ, ಪ್ರಶಾಂತ್ ರಾವ್, ಕಾರ್ಕಳ ತಹಸೀಲ್ದಾರ್ ಪ್ರದೀಪ್ ಕುಮಾರ್, ಹೆಬ್ರಿ ತಹಸೀಲ್ದಾರ್ ಪ್ರಸಾದ್ ಉಪಸ್ಥಿತರಿದ್ದರು.

