ಬೆಂಗಳೂರು : ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಇದೇ ಆಗಸ್ಟ್ 27ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ
ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ ಬುದ್ಧ ಅಂಬೇಡ್ಕರ್ ಸಮಾವೇಶದಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದರು. ಈ ವೇಳೆ ಅವರು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.ಹಿಂದೂ ಎಂಬ ಪದ ಮೂಲತಃ ಭಾರತದ್ದಲ್ಲ, ಅದು ಪರ್ಷಿಯಾದಿಂದ ಬಂದ ಪದ . ಅಸಲಿಗೆ ಹಿಂದೂ ಎಂಬ ಪದಕ್ಕೆ ಪರ್ಷಿಯಾ ಭಾಷೆಯಲ್ಲಿ ಅಶ್ಲೀಲವಾದ ಅರ್ಥಗಳಿವೆ, ಬೇಕಾದರೆ ಯಾರಾದರೂ ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಬಹುದು ಎಂದು ಅವರು ಹೇಳಿದ್ದರು.
ಸತೀಶ್ ಜಾರಕಿಹೊಳಿ ಹೇಳಿಕೆಗೆ ಬಿಜೆಪಿ ನಾಯಕರು ಹಾಗೂ ಹಿಂದೂ ಕಾರ್ಯಕರ್ತರು, ರಾಜ್ಯದ ಹಲವು ಕಡೆ ಸತೀಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರು. ವಕೀಲ ದಿಲೀಪ್ ಕುಮಾರ್ ಅವರು ಕೋರ್ಟ್ ಮೊರೆ ಹೋಗಿದ್ದರು.
ದೂರು ಪರಿಗಣಿಸಿದ ನ್ಯಾ. ಕೆ.ಎನ್.ಶಿವಕುಮಾರ್ ಅವರಿದ್ದ ಪೀಠ ಆಗಸ್ಟ್ 27ಕ್ಕೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.