

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದುಕೊಂಡು ಬಂದಿದ್ದ ದೂರುದಾರ ಸಿಎನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು 10 ದಿನಗಳ ಕಾಲ ವಿಶೇಷ ತನಿಖಾ ತಂಡದ (ಎಸ್ಐಟಿ) ವಶಕ್ಕೆ ಒಪ್ಪಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನ್ಯಾಯಾಲಯ ಆದೇಶಿಸಿದೆ.
ಇಂದಿನಿಂದ ಹತ್ತು ದಿನಗಳ ಕಾಲ ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನ ವಿಚಾರಣೆ ನಡೆಸಲಿದ್ದು, ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಸುತ್ತಾಮುತ್ತ ಹಲವು ಕಡೆ ಕರೆದೊಯ್ದು ಸ್ಥಳ ಮಹಜರು ಕೂಡ ಮಾಡುವ ಸಾಧ್ಯತೆ ಇದೆ. ಆತ ಬುರುಡೆ ತಂದ ಜಾಗಕ್ಕೂ ಕರೆದುಕೊಂಡು ಹೋಗುವ ಸಾಧ್ಯತೆ ಇದೆ.
ಆರೋಪಿಯ ಹಿಂದೆ ಸಾಕಷ್ಟು ಜನ ಇದ್ದಾರೆ. ಈ ಬಗ್ಗೆ ವಿವರವಾಗಿ ತನಿಖೆ ನಡೆಸುವ ಅವಶ್ಯಕತೆ ಇದೆ. ಹೀಗಾಗಿ ಚಿನ್ನಯ್ಯನನ್ನು ವಶಕ್ಕೆ ನೀಡಬೇಕು ಎಂದು ಎಸ್ಐಟಿ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ, ಎಸ್ಐಟಿ ವಶಕ್ಕೆ ಒಪ್ಪಿಸಿ ಆದೇಶ ನೀಡಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ಆಗಿದ್ದ ಚಿನ್ನಯ್ಯನನ್ನು ತೀವ್ರ ವಿಚಾರಣೆಯ ನಂತರ ಶನಿವಾರ ಬೆಳಗ್ಗೆ ಎಸ್ಐಟಿ ಬಂಧಿಸಿದೆ.
ಬುರುಡೆ ಹಿಡಿದುಕೊಂಡು ಬಂದಿದ್ದ ಈ ಮಾಸ್ಕ್ಮ್ಯಾನ್ ಯಾರು, ಎಲ್ಲಿಯವನು ಎಂದು ಸಾಕಷ್ಟು ಚರ್ಚೆಗಳು ನಡೆದಿದ್ದವು. ಈಗ ಸ್ವತಃ ಎಸ್ಐಟಿ ಅಧಿಕಾರಿಗಳು ದಾಖಲೆ ಸಮೇತ ಈತ ಮಂಡ್ಯದ ಚಿಕ್ಕಬಳ್ಳಿ ಗ್ರಾಮದವನು ಎಂದು ಬಯಲು ಮಾಡಿದ್ದಾರೆ.
ಅಕ್ರಮವಾಗಿ ನೂರಾರು ಹೆಣಗಳನ್ನ ಹೂತಿದ್ದೇನೆ ಎಂದು ಈತ ತೋರಿಸಿದ 17 ಪಾಯಿಂಟ್ಗಳಲ್ಲೂ ಶೋಧ ಮಾಡಲಾಗಿತ್ತು. ಆದರೆ ಈತ ಹೇಳಿದಂತೆ ಅಸ್ಥಿಪಂಜರಗಳು ಸಿಕ್ಕಿಲ್ಲ. ಹೀಗಾಗಿ, ಈ ಮಾಸ್ಕ್ಮ್ಯಾನ್ ಯಾರು? ಈತನ ಬ್ಯಾಕ್ಗ್ರೌಂಡ್ ಏನು? ಅವನ ಉದ್ದೇಶ ಏನು? ಎಂದು ಮುಖವಾಡ ಕಳಚಲಾಗಿದೆ.
ಮುಸುಕುಧಾರಿಯ ಮೊದಲ ಪತ್ನಿ ಇತ್ತೀಚೆಗೆ ಮಾಧ್ಯಮದ ಎದುರು ಬಂದು ಧರ್ಮಸ್ಥಳದಲ್ಲಿದ್ದಾಗ ಆತ ಹೇಳಿದಂತೆ ಯಾವುದೇ ಘಟನೆಗಳು ನಡೆದಿಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದರು. ಮಂಡ್ಯದವರೇ ಆದ ಇವರನ್ನ ಮದುವೆಯಾಗಿ 7 ವರ್ಷ ಸಂಸಾರ ಮಾಡಿದ್ದ. ಮದುವೆ ಬಳಿಕ ಧರ್ಮಸ್ಥಳದ ನೇತ್ರಾವತಿಯಲ್ಲಿ 7 ವರ್ಷ ಇದ್ದೆವು ಎಂದಿದ್ದರು.
ಸದ್ಯ ಬಂಧಿತ ಮಾಸ್ಕ್ಮ್ಯಾನ್ ಮಂಡ್ಯ ಜಿಲ್ಲೆಯ ಹಲ್ಲೆಗೆರೆ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಇಟ್ಟಿಗೆ ಫ್ಯಾಕ್ಟರಿಯಲ್ಲೂ ಕೆಲಸ ಮಾಡಿಕೊಂಡಿದ್ದ. ಕಳೆದ 25 ವರ್ಷಗಳ ಹಿಂದೆ ಆತ ಧರ್ಮಸ್ಥಳಕ್ಕೆ ಹೋಗಿದ್ದ. ಅಲ್ಲಿ ಕಸಗುಡಿಸುವುದು, ಬಾತ್ರೂಂ ತೊಳೆಯುವ ಕೆಲಸ ಮಾಡಿಕೊಂಡಿದ್ದ. ಒಡವೆ ಕಳ್ಳತನ ಮಾಡಿದ್ದರಿಂದ ಆತನನ್ನ ಧರ್ಮಸ್ಥಳದಿಂದ ಕಳುಹಿಸಿದ್ದರು. ಬಳಿಕ ಐದಾರು ವರ್ಷಗಳ ಹಿಂದೆ ಮತ್ತೆ ಗ್ರಾಮಕ್ಕೆ ಬಂದು ಇದ್ದು ಹೋಗಿದ್ದ.
ಸದ್ಯ ಎಸ್ಐಟಿಯಿಂದ ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ಮಾಡಿದ್ದು, ಈ ವೇಳೆ ಎರಡು ವರ್ಷ ತಮಿಳುನಾಡಿನ ಈರೋಡ್ನ ಚಿಕ್ಕರಸಿನಪಾಳ್ಯದಲ್ಲಿ ಇದಿದ್ದಾಗಿ ಹೇಳಿಕೆ ನೀಡಿದ್ದಾನೆ. ಬಳಿಕ ಮತ್ತೆ ಉಜಿರೆಗೆ ಬಂದು ಪಂಚಾಯತ್ನ ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿದ್ದ. ಅಲ್ಲಿ ಜಯಂತ್ ಟಿ ಪರಿಚಯ ಆದ ಬಗ್ಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.














