Share this news

ಬೆಂಗಳೂರು ಜು,21: ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಇನ್ನುಮುಂದೆ ನಾಡ ಕಚೇರಿಯಲ್ಲೂ ಆಸ್ತಿ ಡಿಜಿಟಲ್ ದಾಖಲೆಗಳು ಸಿಗಲಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಅವರು ಬೆಂಗಳೂರಿನ ವಿಕಾಸಸೌಧದಲ್ಲಿ ಶುಕ್ರವಾರ ಭೂ ಸುರಕ್ಷಾ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ತಿ ದಾಖಲೆಗಳಿಗಾಗಿ ಜನರು ಅಲೆದಾಡುವುದನ್ನು ತಪ್ಪಿಸಲು ನಮ್ಮ ಸರ್ಕಾರ ಜಾರಿಗೆ ತಂದಿರುವ ಭೂ ಸುರಕ್ಷಾ ಯೋಜನೆಯಡಿ ಆಸ್ತಿ ದಾಖಲೆಗಳನ್ನು ಡಿಜಟಲೀಕರಣ ಮಾಡಿ ಆನ್‌ಲೈನ್ ಮೂಲಕ ವಿತರಿಸಲಾಗುತ್ತಿದೆ. ಆಸ್ತಿಗಳ ಡಿಜಿಟಲ್ ದಾಖಲೆಗಳು ಹೋಬಳಿ ಮಟ್ಟದಲ್ಲಿರುವ ನಾಡಕಚೇರಿಗಳಲ್ಲೂ ಲಭ್ಯವಿರುತ್ತವೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಗೊತ್ತಿಲ್ಲದವರಿಗೂ ಡಿಜಿಟಲ್ ದಾಖಲೆಗಾಗಿ ನಾಡ ಕಚೇರಿಗಳಲ್ಲಿನ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದಾದ ವ್ಯವಸ್ಥೆಮಾಡಲಾಗಿದೆ. ಜನ ಈ ಕೇಂದ್ರಗಳಿಗೆ ಭೇಟಿ ನೀಡಿ ನೇರವಾಗಿ ದಾಖಲೆ ಪಡೆಯಬಹುದು ಎಂದರು.
ನಾಡ ಕಚೇರಿಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರೆತರೆ, ಮುಂಬರುವ ದಿನಗಳಲ್ಲಿ ಈ ಸೇವೆಗಳನ್ನು ಗ್ರಾಪಂ ಮಟ್ಟಕ್ಕೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಅಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ ಕೇಂದ್ರಗಳ ಮೂಲಕ ಜನ ಡಿಜಿಟಲ್ ದಾಖಲೆಗಳನ್ನು ಪಡೆಯಬಹುದು ಎಂದರು.

 

 

Leave a Reply

Your email address will not be published. Required fields are marked *