ವರದಿ: ಕರಾವಳಿ ನ್ಯೂಸ್ ಡೆಸ್ಕ್
ಇಂದಿನ ದಿನಗಳಲ್ಲಿ ಪ್ರತಿಕೂಲ ಹವಾಮಾನದ ಪರಿಸ್ಥಿತಿಯಲ್ಲಿ ರೈತರು ಹಾಗೂ ಕೃಷಿಕರು ತಾವು ಬೆಳೆದ ಬೆಳೆ ಉಳಿಸಿಕೊಳ್ಳಲು ಹರಸಾಹಸಪಡುವಂತಾಗಿದೆ.
ಅದರಲ್ಲೂ ಕರಾವಳಿ ಜಿಲ್ಲೆಗಳ ಪ್ರಮುಖ ತೋಟಗಾರಿಕಾ ಬೆಳೆಯಾದ ಅಡಿಕೆ ಬೆಳೆಯನ್ನು ಕೊಳೆ ರೋಗದಿಂದ ಕಾಪಾಡುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ. ವಿಪರೀತ ಮಳೆಯಿಂದ ಅಡಿಕೆ ಕೊನೆಗಳಿಗೆ ಬೋರ್ಡೋ ದ್ರಾವಣ ಸಿಂಪಡಣೆ ಮಾಡಲು ಸಾಧ್ಯವಾಗದೇ ಕೊಳೆ ರೋಗಕ್ಕೆ ಬಹುತೇಕ ಫಸಲು ನಷ್ಟವಾಗಿ ರೈತರಿಗೆ ಹಾಕಿದ ಬಂಡವಾಳವು ಕೈಯಿಂದ ಜಾರುವುದು ಹೊಸತೇನಲ್ಲ.ಬಹುತೇಕ ರೈತರಲ್ಲಿ ಅಡಿಕೆ ಬೆಳೆಯನ್ನು ಕೇವಲ ಬೋರ್ಡೋ ದ್ರಾವಣ ಸಿಂಪಡಣೆಯಿಂದ ಮಾತ್ರ ರಕ್ಷಿಸಬಹುದೆಂಬ ತಪ್ಪು ಕಲ್ಪನೆಯಿದೆ.ನಿರ್ದಿಷ್ಟ ಸಮಯದಲ್ಲಿ ಬೋರ್ಡೋ ದ್ರಾವಣ ಸಿಂಪಡಣೆಯಾಗದಿದ್ದರೂ ಅಡಿಕೆ ಫಸಲನ್ನು ಕೊಳೆರೋಗದಿಂದ ರಕ್ಷಿಸಬಹುದಾಗಿದೆ.
ಅಡಿಕೆ ಫಸಲು ರಕ್ಷಣೆ ಹೇಗೆ?
ಮೈಲುತುತ್ತು ಹಾಗೂ ಸುಣ್ಣ ಮಿಶ್ರಣದ ಬೋರ್ಡೋ ದ್ರಾವಣವು ಅಡಿಕೆ ಬೆಳೆಯನ್ನು ಕೊಳೆರೋಗದಿಂದ ರಕ್ಷಿಸಲು ಬಹು ಉತ್ತಮ ಆಯ್ಕೆಯಾಗಿದೆ. ಆದರೆ ನಿಗದಿತ ಸಮಯಕ್ಕೆ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿದರೂ ಕೊಳೆ ರೋಗದಿಂದ ಅಡಿಕೆ ಫಸಲು ಉದುರುವ ಸಾಧ್ಯತೆಗಳು ಕೂಡ ಇದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅಡಿಕೆ ತೋಟದಲ್ಲಿ ಸ್ವಚ್ಛತೆ ಇಲ್ಲದಿರುವುದು. ಅಡಿಕೆ ಸೋಗೆ ಹಾಗೂ ತರಗಲೆಗಳನ್ನು ಕೊಳೆಯಲು ಬಿಟ್ಟಾಗ ಇದರಿಂದ ಸೂಕ್ಷ್ಮಾಣು ಜೀವಿಗಳು ಉತ್ಪತ್ತಿಯಾಗಿ ಅಡಿಕೆ ಕೊಳೆ ರೋಗ ಸಾಧಿಸುತ್ತವೆ. ಇದಲ್ಲದೇ ಸೂಕ್ತ ಬಸಿಕಾಲುವೆ ವ್ಯವಸ್ಥೆ ಇಲ್ಲದೇ ಮಳೆಗಾಲದಲ್ಲಿ ಅಡಿಕೆ ತೋಟದಲ್ಲಿ ನೀರು ನಿಂತು ಇದರಿಂದ ಕೊಳೆರೋಗ ಹೆಚ್ಚಾಗಬಹುದು.ಆದ್ದರಿಂದ ಕೊಳೆರೋಗದಿಂದ ಫಸಲು ರಕ್ಷಿಸಲು ತೋಟವನ್ನು ಸ್ವಚ್ಛಗೊಳಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ.ಮಳೆಯಿಂದ ನಿಗದಿತ ಸಮಯದಲ್ಲಿ ಬೋರ್ಡೋ ದ್ರಾವಣ ಸಿಂಪಡಣೆ ಸಾಧ್ಯವಾಗದಿದ್ದರೂ ಮಳೆಗಾಲದ ಆರಂಭದಲ್ಲಿ ತೋಟಗಳಿಗೆ ನಿಗದಿತ ಪ್ರಮಾಣದ ಸುಣ್ಣ ಕೊಡಬೇಕು ಇದಲ್ಲದೇ ತೋಟದಲ್ಲಿ ನೀರು ನಿಲ್ಲದಂತೆ ಹಾಗೂ ಕೊಳೆತ ಅಡಿಕೆ ಸೋಗೆಗಳನ್ನು ತೆರವು ಮಾಡಿದ್ದಲ್ಲಿ ಕೊಳೆರೋಗದಿಂದ ಅಡಿಕೆ ಬೆಳೆಯ ನಷ್ಟವನ್ನು ಹತೋಟಿಗೆ ತರಬಹುದಾಗಿದೆ.
ರೈತರು ವಿಪರೀತ ಬಿಸಿಲು ಹಾಗೂ ಮಳೆಯಿಂದ ಫಸಲು ನಷ್ಟವಾಗಿ ರೈತರು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಸರ್ಕಾರದಿಂದ ಹವಾಮಾನ ಅಧಾರಿತ ಬೆಳೆ ವಿಮೆ ಯೋಜನೆ ಜಾರಿಯಲ್ಲಿದೆ. ರೈತರು ತಮ್ಮ ಬೆಳೆ ನಷ್ಟ ತಪ್ಪಿಸಲು ಬೆಳೆ ವಿಮೆಯ ಕಂತು ಪಾವತಿಸಿ ಗರಿಷ್ಠ ಪ್ರಮಾಣದಲ್ಲಿ ಪರಿಹಾರವನ್ನು ಕೂಡ ಪಡೆಯಬಹುದು.
