ಬೆಂಗಳೂರು, ಅ.07: ರಾಜ್ಯದಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ಕಾರ್ಯವನ್ನು ಪೂರ್ಣಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18 ರವರೆಗೆ ದಸರಾ ರಜೆಯನ್ನು ವಿಸ್ತರಿಸಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಜಾತಿ ಗಣತಿ ಸಮೀಕ್ಷೆ ಕಾರ್ಯವನ್ನು ಶಿಕ್ಷಕರು ಕೈಗೊಂಡಿದ್ದಾರೆ. ನಿಗದಿತ ಕಾಲಾವಧಿಯಲ್ಲಿ ಜಾತಿ ಗಣತಿ ಕಾರ್ಯ ಪೂರ್ಣಗೊಂಡಿಲ್ಲ. ಗಣತಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಶಾಲೆಗಳ ದಸರಾ ರಜೆಯನ್ನು ವಿಸ್ತರಣೆ ಮಾಡಲಾಗಿದೆ ಎಂದರು.
ಸರ್ಕಾರಿ ಶಾಲೆಗಳ ರಜೆ ವಿಸ್ತರಣೆ ಆದೇಶವು ಕೇವಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಮಾತ್ರ ಒಳಗೊಂಡಿರುವುದರಿಂದ, ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಪೂರ್ವ ನಿಗದಿತ ವೇಳಾಪಟ್ಟಿಯಂತೆ ಶಾಲಾ ಕಾರ್ಯಗಳನ್ನು ಮುಂದುವರಿಸಲು ನಿರ್ಧರಿಸಿವೆ. ಖಾಸಗಿ ಶಾಲೆಗಳು ನಾಳೆಯಿಂದ ಶಾಲೆಗಳನ್ನು ತೆರೆಯಲು ಮುಖ್ಯ ಕಾರಣ, ಅವುಗಳ ಸಿಬ್ಬಂದಿ ಜಾತಿ ಸಮೀಕ್ಷೆಯ ಕೆಲಸದಲ್ಲಿ ಭಾಗವಹಿಸದಿರುವುದು. ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರಿಗೆ ಸಮೀಕ್ಷಾ ಕಾರ್ಯದ ಹೊರೆ ಇರುವುದರಿಂದ ರಜೆಯನ್ನು ವಿಸ್ತರಿಸಲಾಗಿತ್ತು. ಆದರೆ, ಖಾಸಗಿ ಶಾಲಾ ಸಿಬ್ಬಂದಿಗೆ ಈ ಸಮೀಕ್ಷೆಯ ಜವಾಬ್ದಾರಿ ಇಲ್ಲ.