ಬೆಂಗಳೂರು: ಆಸ್ತಿ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರವು ಇ-ಖಾತಾ ಅಭಿಯಾನ ಹಮ್ಮಿಕೊಂಡಿದ್ದು, ಕರ್ನಾಟಕ ಗ್ರಾಮ ಸ್ವರಾಜ್-ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ 2025 ಮಂಡಿಸಿದೆ. ಈ ಮೂಲಕ ಗ್ರಾಮೀಣ ಭಾಗದ ಅನಧಿಕೃತ ಆಸ್ತಿಗಳಿಂದ ತೆರಿಗೆ ಅಥವಾ ದಂಡ ವಸೂಲಿ ಹಾಗೂ ಆ ಸ್ವತ್ತುಗಳನ್ನು ಇ-ಖಾತಾ ವ್ಯವಸ್ಥೆಯಡಿ ತರಲಿದೆ. ಈಗ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇದ್ದ ಇ-ಖಾತಾ ವಿತರಣೆ ಇನ್ಮುಂದೆ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ವಿತರಣೆಗೆ ಪ್ಲ್ಯಾನ್ ಮಾಡಿದ್ದು, ಜುಲೈ 15ರಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಖಾತಾ ಸಿಗುವ ಸಾಧ್ಯತೆಗಳಿವೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಇ-ಖಾತಾ ವಿತರಣೆ ಮಾಡಲಾಗುತ್ತಿದೆ. ಇನ್ನು ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ವಿತರಣೆಗೆ ಪ್ಲ್ಯಾನ್ ಮಾಡಲಾಗಿದ್ದು, ಜುಲೈ 15ರಿಂದ ಪಂಚಾಯಿತಿ ವ್ಯಾಪ್ತಿಯಲ್ಲೂ ಇ-ಖಾತಾ ನೋಂದಣಿಗೆ ಪ್ಲ್ಯಾನ್ ಮಾಡಲಾಗಿದೆ ಎಂದು ತಿಳಿಸಿದರು.
ಖಾತಾ ಪ್ರಮಾಣ ಪತ್ರ ಎನ್ನುವುದು ಆಸ್ತಿ ಮಾಲೀಕತ್ವ ಹಾಗೂ ಆ ಆಸ್ತಿಯ ನಿಖರ ಮಾಹಿತಿಯಾಗಿದೆ. ಆಯಾ ಸ್ಥಳೀಯ ಸಂಸ್ಥೆಗಳು ನೀಡುವ ಈ ಪ್ರಮಾಣಪತ್ರದಲ್ಲಿ ಆಸ್ತಿಯ ಗಾತ್ರ, ಯಾವ ಪ್ರದೇಶ, ಸ್ಥಳ ಹಾಗೂ ಆ ಆಸ್ತಿ ವಸತಿ ಅಥವಾ ವಾಣಿಜ್ಯ ಯಾವ ವ್ಯಾಪ್ತಿಗೆ ಸೇರಿದೆ ಎನ್ನುವುದು ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯೂ ಅದರಲ್ಲಿ ಇರುತ್ತದೆ. E-ಖಾತಾ ಎನ್ನುವುದು A ಖಾತಾದ ಡಿಜಿಟಲ್ ಆವೃತ್ತಿಯಾಗಿದೆ. ರಾಜ್ಯದಲ್ಲಿ ಇದೀಗ ಆಸ್ತಿ ನೋಂದಣಿಗೆ E-ಖಾತಾ ಕಡ್ಡಾಯವಾಗಿದೆ.