ನವದೆಹಲಿ:ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇಂದು ರಾತ್ರಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92ರ ಹರೆಯದ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಆರ್’ಬಿಐ ನ ಮಾಜಿ ಗವರ್ನರ್ ಹಾಗೂ ಆರ್ಥಿಕ ತಜ್ಞ ಎಂದೇ ಖ್ಯಾತಿ ಪಡೆದಿದ್ದ ಡಾ.ಮನಮೋಹನ್ ಸಿಂಗ್ ಅವರು 1991 ರಲ್ಲಿ ರಾಜ್ಯಸಭೆಗೆ ಪ್ರವೇಶಿಸುವ ಮೂಲಕ ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದರು.ಇದಾದ ಬಳಿಕ 2004ರಿಂದ 2014ರವರೆಗೆ ಎರಡು ಅವಧಿಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ಧಿಯಾಗಿದ್ದ ಅವರು 2024ರ ಏಪ್ರಿಲ್ ವರೆಗೂ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈ ಮೂಲಕ ಅವರು ರಾಜ್ಯ ಸಭೆಯಲ್ಲಿ ಸುಧೀರ್ಘ 33 ಕಾಲ ಸದಸ್ಯರಾಗಿದ್ದರು.
ಡಾ.ಸಿಂಗ್ ದೇಶದ ಆರ್ಥಿಕ ಸುಧಾರಣೆಗಳ ದಿಟ್ಟ ಹೆಜ್ಜೆ ಕೈಗೊಂಡು, ಆಧುನಿಕ ಭಾರತದ ಆರ್ಥಿಕತೆಯ ರೂವಾರಿ ಎನಿಸಿದ್ದ ಅವರು 1991ರಿಂದ 1996ರವರೆಗೆ ನರಸಿಂಹ ರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು.
ಮನಮೋಹನ್ ಸಿಂಗ್ ಅವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ್ದರು. ಡಾ. ಸಿಂಗ್ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದ್ದರು.ಬಳಿಕ 1957ರಲ್ಲಿ ಅವರು ಇಂಗ್ಲೆಂಡ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯೊಂದಿಗೆ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಅವರು 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದರು.ಭಾರತದ ರಾಜಕೀಯ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿದ್ದ ಡಾ.ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಗಳು ಹಾಗೂ ಸುಧಾರಣೆಗಳು ಗಮನಾರ್ಹ ಸಾಧನೆಯಾಗಿತ್ತು.
ಗಣ್ಯರ ಸಂತಾಪ
ಡಾ.ಮನಮೋಹನ್ ಸಿಂಗ್ ಅವರ ಹಠಾತ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ,ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ವರಿಷ್ಟೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.