ಬೆಂಗಳೂರು: ಮಂಗಳೂರಿನ ಕಂಕನಾಡಿ ಬಳಿ 2022ರಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೊಟ ಪ್ರಕರಣಕ್ಕೆ ಇಡಿ (ಜಾರಿ ನಿರ್ದೇಶನಾಲಯ) ಎಂಟ್ರಿ ಕೊಟ್ಟಿದ್ದು, ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.ಪ್ರಕರಣದ ಆರೋಪಿ ಸೈಯದ್ ಯಾಸೀನ್ನ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗಿದೆ.
ಮತ್ತೊಂದೆಡೆ ಶಂಕಿತ ಉಗ್ರರು ಧರ್ಮಸ್ಥಳ ದೇವಾಲಯದಲ್ಲಿ ಬಾಂಬ್ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ಸ್ಫೋಟಕ ವಿಚಾರವನ್ನ ಇ.ಡಿ. ಬಯಲಿಗೆಳೆದಿದೆ. ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಈ ಬಾಂಬ್ ಅನ್ನು ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಾಲಯದಲ್ಲಿ ಇರಿಸಿ ಸ್ಫೋಟಿಸಲು ಸಂಚು ರೂಪಿಸಿದ್ದ. ಬಾಂಬ್ ಟೈಮರ್ ಅನ್ನು 90 ನಿಮಿಷಗಳ ಬದಲು 9 ಸೆಕೆಂಡ್ಗೆ ನಿಗದಿ ಮಾಡಿದ್ದ ಪರಿಣಾಮ ಅದು ಮಾರ್ಗ ಮಧ್ಯೆಯೇ ಆಟೋರಿಕ್ಷಾದೊಳಗೆ ಸ್ಫೋಟವಾಗಿತ್ತು. ಐಸಿಸ್ ಆನ್ಲೈನ್ ಹ್ಯಾಂಡ್ಲರ್ ಕರ್ನಲ್ ಕಳುಹಿಸುತ್ತಿದ್ದ ಹಣವನ್ನು ಆರೋಪಿ ಮೊಹಮ್ಮದ್ ಶಾರೀಕ್ ಸ್ವೀಕರಿಸಲು ಮತ್ತೊಬ್ಬ ಆರೋಪಿ ಮಾಜ್ ಮುನೀರ್ ಈ ಅನಧಿಕೃತ ಬ್ಯಾಂಕ್ ಖಾತೆಗಳ ಮಾಹಿತಿ ನೀಡುತ್ತಿದ್ದ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ. ತಿಳಿಸಿದೆ.
ಆರೋಪಿ ಮಾಜ್ ಮುನೀರ್ ಕ್ರಿಪ್ಟೋ ಕರೆನ್ಸಿಯನ್ನ ಏಜೆಂಟ್ಗಳ ಮೂಲಕ ಮಹಮ್ಮದ್ ಶಾರೀಕ್ಗೆ ಹಣ ತಲುಪಿಸಿದ್ದನು. ಪ್ರಕರಣ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ಅಲಿಯಾಸ್ ಪ್ರೇಮ್ ರಾಜ್ ಕೂಡ ಕ್ರಿಪ್ಟೊ ಕರೆನ್ಸಿ ಮೂಲಕವೇ ಇತರೆ ಆರೋಪಿಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದನು. ಮೊಹಮ್ಮದ್ ಶಾರೀಕ್ 2 ಲಕ್ಷ 68 ಸಾವಿರ ಹಣವನ್ನ ಕ್ರಿಪ್ಟೋ ಕರೆನ್ಸಿ ಏಜೆಂಟ್ಗಳ ಮೂಲಕ ಆರೋಪಿಗಳಿಗೆ ವರ್ಗಾವಣೆ ಮಾಡಿದ್ದನು. ಈ ಹಣದಿಂದ ಆರೋಪಿಗಳು ಆನ್ಲೈನ್ನಲ್ಲಿ ಐಇಡಿ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿ ಖರೀದಿಸುತ್ತಿದ್ದರು ಎನ್ನಲಾಗಿದೆ.ಉಗ್ರ ಸಂಘಟನೆಯನ್ನ ಭಾರತದಾದ್ಯಂತ ವಿಸ್ತರಿಸುವುದು, ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದು ಐಸಿಸ್ ಸಂಘಟನೆ ಗುರಿಯಾಗಿತ್ತು. ಐಸಿಸ್ನ ಹ್ಯಾಂಡ್ಲರ್ಗಳಿಗೆ ಆನ್ಲೈನ್ನಲ್ಲಿ ಟೆಲಿಗ್ರಾಂ ಆ್ಯಪ್ ಮೂಲಕ ತರಬೇತಿ ನೀಡಲಾಗುತ್ತಿತ್ತು.