ತುಮಕೂರು: ಕರ್ನಾಟಕ ಗೃಹ ಸಚಿವ ಡಾ. ಜಿ ಪರಮೇಶ್ವರ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಹೆಗ್ಗೆರೆ ಬಳಿಯಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜು, ತುಮಕೂರಿನ ಎಸ್ಎಸ್ಐಟಿ ಕಾಲೇಜಿನ ಮೇಲೆ ಇಡಿ ದಾಳಿ ನಡೆದಿದೆ. ಅಲ್ಲದೆ, ನೆಲಮಂಗಲದ ಟಿ.ಬೇಗೂರಿನಲ್ಲಿರುವ ಕಾಲೇಜಿನ ಮೇಲೂ ರೇಡ್ ಮಾಡಲಾಗಿದೆ.
ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಎಸ್ಎಸ್ಐಟಿ ಕಾಲೇಜಿನ ಮೇಲೆ ಇಡಿ ದಾಳಿ ನಡೆದಿದೆ. ಮೂರು ಕಾರುಗಳಲ್ಲಿ ಬಂದ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಎಸ್ಎಸ್ಐಟಿ ಕಾಲೇಜಿನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ, ಮಾಧ್ಯಮ ಪ್ರತಿನಿಧಿಗಳು ಕಾಲೇಜು ಆವರಣದ ಒಳಗೆ ಬಾರದಂತೆ ಡಿವೈಎಸ್ಪಿ ತಾಕೀತು ಮಾಡಿದ್ದಾರೆ. ಅಲ್ಲದೆ, ಡಿವೈಎಸ್ಪಿ ನೇತೃತ್ವದಲ್ಲಿ ಕಾಲೇಜಿಗೆ ಭದ್ರತೆ ಒದಗಿಸಲಾಗಿದೆ.
2019ರಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿತ್ತು. ಆಗ ವೈದ್ಯಕೀಯ ಸೀಟು ಅಕ್ರಮ ಹಂಚಿಕೆ ಆರೋಪ ಸಂಬಂಧ ಐಟಿ ದಾಳಿ ನಡೆದಿತ್ತು. ಆ ಸಂದರ್ಭದಲ್ಲೇ ಪರಮೇಶ್ವರ್ ಆಪ್ತ ಆತ್ಮಹತ್ಯೆಗೆ ಶರಣಾಗಿದ್ದ. ಅದಾದ ನಂತರ ದಾಳಿ ಪ್ರಕ್ರಿಯೆ ನಿಲ್ಲಿಸಲಾಗಿತ್ತು. 2019ರ ಐಟಿ ದಾಳಿ ಸಂದರ್ಭದಲ್ಲಿ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಬೆಳವಣಿಗೆಯ ನಂತರ ಅವರು ಬೆಂಗಳೂರಿನ ಜ್ಞಾನ ಭಾರತಿ ವಿವಿ ಕ್ಯಾಂಪಸ್ ವ್ಯಾಪ್ತಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಈ ವಿಚಾರ ಕರ್ನಾಟಕ ರಾಜಕೀಯದಲ್ಲಿಯೂ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ರಮೇಶ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳ ಕಾರಣ ಎಂಬ ದೂರುಗಳು ಕೇಳಿಬಂದಿವೆ ಎಂದು ಅಂದಿನ ವಿರೋಧ ಪಕ್ಷದ ನಾಯಕ, ಈಗಿನ ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದರು.