ಮೈಸೂರು: ಮುಡಾ ಸೈಟ್ ಹಂಚಿಕೆ ಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಶೋಧ ಕಾರ್ಯ ಅಂತ್ಯವಾಗಿದೆ. ತಡರಾತ್ರಿ 2.30ರ ವರೆಗೂ ಇಡಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ಮೂಲಕ ಬರೋಬ್ಬರಿ 29 ಗಂಟೆಗಳ ಶೋಧ ನಡೆಸಿದ ಇಡಿ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರೆ, ಇನ್ನು ಕೆಲ ದಾಖಲೆಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಿಕೊಂಡು ಹೋಗಿದ್ದಾರೆ.
ಮುಡಾದಿಂದ ಸಾವಿರಾರು ಪುಟಗಳ ದಾಖಲೆಗಳನ್ನು ಇಡಿ ವಶಕ್ಕೆ ಪಡೆದಿದೆ. ಅಲ್ಲದೇ ಎಲ್ಲಾ ಹಂತದ ಅಧಿಕಾರಿಗಳ ಡ್ರಿಲ್ ನಡೆಸಿದೆ. ನಿನ್ನೆ (ಅ.19) ಬೆಳಗ್ಗೆ 10 ಗಂಟೆಯಿಂದ ಮಧ್ಯರಾತ್ರಿ 2:40 ಗಂಟೆ ವರೆಗೆ ವಿಚಾರಣೆ ನಡೆಸಲಾಗಿದೆ. ದಾಳಿ ವೇಳೆ ಮಹತ್ವದ ದಾಖಲೆಗಳನ್ನ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿ ವಾಪಸ್ ನೀಡಿದ 14 ನಿವೇಶನ ಹಾಗೂ ಮುಡಾದಲ್ಲಿ 50:50 ಅನುಪಾತದಡಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಮಗ್ರ ದಾಖಲೆ ಸಂಗ್ರಹಿಸಿ ಎರಡು ಕೆಂಪು ಬಣ್ಣದ ಬಾಕ್ಸ್‌ಗಳಲ್ಲಿ ದಾಖಲೆಗಳನ್ನ ತೆಗೆದುಕೊಂಡು ಹೋಗಿದ್ದಾರೆ. ತಾಲೂಕು ಕಚೇರಿಯಿಂದಲೂ ಅನೇಕ ದಾಖಲೆ ವಶಕ್ಕೆ ಪಡೆಯಲಾಗಿದೆ.
ಶತಯಗತಾಯ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಂಡು ಹೋಗಬೇಕೆಂದು ನಿರ್ಧರಿಸಿರುವ ಇಡಿ ಅಧಿಕಾರಿಗಳ ತಂಡವು, ಶನಿವಾರ ಬೆಳಿಗ್ಗೆ ಕೂಡ ಮುಡಾ ಕಚೇರಿಗೆ ದೌಡಾಯಿಸಿ ತನಿಖೆ ನಡೆಸಿದ್ದಾರೆ. ಮುಡಾ ಆಯುಕ್ತ ರಘುನಂದನ್ ಅವರು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ತಮ್ಮ ಕಚೇರಿಗೆ ದೌಡಾಯಿಸಿದರು. ಇಡಿ ಅಧಿಕಾರಿಗಳ ಸೂಚನೆಯಂತೆ ಮುಡಾಗೆ ಆಗಮಿಸಿದ ಮುಡಾದ ಕಾರ್ಯದರ್ಶಿ ಪ್ರಸನ್ನಕುಮಾರ್ ಸೇರಿದಂತೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಸದ್ಯ ಎರಡನೇ ದಿನದ ನಂತರ ಇಡಿ ಕಾರ್ಯಾಚರಣೆ ಮುಕ್ತಾಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಇದು ಆರಂಭ ಮಾತ್ರ. ಸದ್ಯ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿರುವ ಇಡಿ ಅಧಿಕಾರಿಗಳು ಆ ದಾಖಲೆಗಳ ಆಧಾರದ ಮೇಲೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಅವರಿಂದ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಾರೆ ಎನ್ನಲಾಗಿದೆ.
ಒಟ್ಟಾರೆ ಮೂಡದಲ್ಲಿ ಇಡೀ ಅಧಿಕಾರಿಗಳ ಈ ಕಾರ್ಯಚರಣೆ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ ಮಾತ್ರವಲ್ಲದೆ 50:50 ಅನುಪಾತದಲ್ಲಿ ಯಾರೆಲ್ಲಾ ಅಕ್ರಮ ನಿಯಮಬಾಹಿರವಾಗಿ ನಿವೇಶನಗಳನ್ನು ಪಡೆದಿದ್ದಾರೋ ಅವರೆಲ್ಲರಿಗೂ ಸಂಕಷ್ಟ ಖಂಡಿತ.