Share this news

ಬೆಂಗಳೂರು: ಎಸ್​ಎಸ್​ಎಲ್​ಸಿ ಮಧ್ಯವಾರ್ಷಿಕ ಪ್ರಶ್ನೆ ಪತ್ರಿಕೆ ಲೀಕ್ ಬಳಿಕ ಶಿಕ್ಷಣ ಇಲಾಖೆ ಎಚ್ಚೆತ್ತುಗೊಂಡಿದೆ. ಸದ್ಯ ಹೈ ಅಲರ್ಟ್ ಆಗಿರುವ ಇಲಾಖೆ, ಎಸ್​ಎಸ್​ಎಲ್​ಸಿ ಮುಖ್ಯ ಪರೀಕ್ಷೆಗೆ ಮತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ವೆಬ್ ಕಾಸ್ಟಿಂಗ್ ಹಾಗೂ ಸಿಸಿಟಿವಿ ಕಣ್ಗಾವಲಿನ ಕಠಿಣ ಪ್ರಯೋಗಕ್ಕೆ ಮುಂದಾಗಿದೆ.

ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ವೆಬ್ ಕಾಸ್ಟಿಂಗ್ ಹಾಗೂ ಇತರ ಕಠಿಣ ನಿಯಮದ ಪರಿಣಾಮ ಫಲಿತಾಂಶ ಕುಸಿತ ಆಯಿತು ಎಂಬ ಟೀಕೆ ವ್ಯಕ್ತವಾಗಿತ್ತು. ಅದಾದ ಬೆನ್ನಲ್ಲೇ ಪ್ರಸಕ್ತ ಸಾಲಿನ ರಾಜ್ಯ ಪಠ್ಯಕ್ರಮ ಅನುಸರಿಸುವ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚು ಮಾಡಲು ಶಿಕ್ಷಣ ಇಲಾಖೆ ನಾನಾ ಸರ್ಕಸ್ ಮಾಡುತ್ತಿದೆ. ಅದರ ಭಾಗವಾಗಿ ವಾರ್ಷಿಕ ಪರೀಕ್ಷೆ ತಯಾರಿ ಅಂತ ಇದೇ ಮೊಟ್ಟ ಮೊದಲ ಬಾರಿಗೆ ಕೆಎಸ್‌ಇಎಬಿ ಮಧ್ಯವಾರ್ಷಿಕ ಪರೀಕ್ಷೆ ನಡೆಸಲು ಪ್ರಶ್ನೆ ಪತ್ರಿಕೆ ತಯಾರಿ ಮಾಡಿತ್ತು. ಆದರೆ ಇದು ಲೀಕ್ ಆಗಿದ್ದು, ಹೊಡೆತ ನೀಡಿದೆ. ಇದೀಗ ಶಿಕ್ಷಣ ಇಲಾಖೆ ಎಚ್ಚೆತ್ತುಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಮತ್ತಷ್ಟು ಕಠಿಣ ರೂಲ್ಸ್ ಜಾರಿಗೆ ಪ್ಲಾನ್ ಮಾಡಿದೆ.

ಎಸ್‌ಎಸ್‌ಎಲ್‌ಸಿ ಅರ್ಧವಾರ್ಷಿಕ ಪರೀಕ್ಷೆಗೆ ಈ ವರ್ಷ ಏಕರೂಪದ ಪ್ರಶ್ನೆ ಪತ್ರಿಕೆಯನ್ನು ಶಿಕ್ಷಣ ಇಲಾಖೆ ಹೊರತಂದಿತ್ತು. ಆದರೆ, ಈ ಮಧ್ಯವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಆನ್ಲೈನ್ ಅಲ್ಲಿ ಸೋರಿಕೆಯಾಗಿದ್ದು, ಕಷ್ಟ ಪಟ್ಟು ಓದುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವಂತೆ ಮಾಡಿದೆ. ಇದು ಪೋಷಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಗೊಂಡಿರುವ ಶಿಕ್ಷಣ ಇಲಾಖೆ, ಅಧಿಕಾರಿಗಳ ಹಂತದಲ್ಲಿ ಸಭೆ ನಡೆಸಿ ಎಡವಟ್ಟಿಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿದೆ. ಮುಂಬರುವ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಗೆ ಪ್ರಶ್ನಪತ್ರಿಕೆ ಲೀಕ್ ತಡೆಯಲು ಮುಂದಾಗಿದೆ. ಪ್ರತಿಯೊಂದು ಕೊಠಡಿಗೂ ಸಿಸಿಟಿವಿ ಕ್ಯಾಮರ ಹಾಗೂ ತಾಲೂಕು ಮಟ್ಟದಲ್ಲಿ ನೋಡಲ್ ಕೇಂದ್ರ ವೆಬ್ ಕಾಸ್ಟಿಂಗ್ ಮತಷ್ಟು ಬಲಪಡಿಸಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯಲ್ಲಿ ನಕಲು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

 

Leave a Reply

Your email address will not be published. Required fields are marked *